ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಯಾಕೋ ಹಿಂಸಾಚಾರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದೀಗ ಮಧ್ಯಂತರ ಪ್ರಧಾನಿ ಮೊಹಮ್ಮದ್ ಯೂನಸ್ ಅವರ ನಿವಾಸದ ಎದುರು ಇಂದು ಹೈ ಡ್ರಾಮಾ ನಡೆಯಿತು.
ಸರ್ಕಾರಿ ನೌಕರರು ಇಂದು ಒಂಬತ್ತನೇ ರಾಷ್ಟ್ರೀಯ ವೇತನ ಶ್ರೇಣಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಯೂನಸ್ ಅವರ ಅಧಿಕೃತ ನಿವಾಸವಾದ ಜಮುನಾ ಹೊರಗೆ ಪ್ರತಿಭಟನೆಯನ್ನು ನಡೆಸಿದರು. ಇದೀಗ ಬಾಂಗ್ಲಾದ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರತಿಭಟನೆ ನಡೆದಿದ್ದು, ಸರಕಾರಕ್ಕೆ ದೊಡ್ಡ ತಲೆನೋವು ತಂದಿದೆ.
ದೇಶದಲ್ಲಿ ಒಂಬತ್ತನೇ ರಾಷ್ಟ್ರೀಯ ವೇತನ ಆಯೋಗದ ವರದಿಯನ್ನು ಆಧರಿಸಿದ ಗೆಜೆಟ್ ಅನ್ನು ತಕ್ಷಣ ಪ್ರಕಟಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಶಹೀದ್ ಮಿನಾರ್‌ನಲ್ಲಿ ಜಮುನಾ ಕಡೆಗೆ ಮೆರವಣಿಗೆ ನಡೆಸಿದರು. ಬೆಳಿಗ್ಗೆ 11.30 ಕ್ಕೆ, ಪ್ರತಿಭಟನಾಕಾರರು ಶಹಬಾಗ್‌ನಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಜಮುನಾ ಪ್ರವೇಶದ್ವಾರದ ಕಡೆಗೆ ಮುನ್ನಡೆದರು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ಧ್ವನಿ ಗ್ರೆನೇಡ್‌ಗಳನ್ನು ಹಾರಿಸಿ, ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದರು.
ಘರ್ಷಣೆಗಳು ತೀವ್ರಗೊಂಡಿದ್ದರಿಂದ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಾಕಾರರು ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶಹಬಾಗ್ ಮತ್ತು ಜಮುನಾ ಸುತ್ತಮುತ್ತಲಿನ ಪ್ರದೇಶವು ಉದ್ವಿಗ್ನವಾಗಿತ್ತು, ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ .



