ಹೊಸದಿಗಂತ ಬೆಳಗಾವಿ:
ಜಿಲ್ಲೆಯ ಬಹುಕಾಲದ ಕನಸಾದ 70 ಕಿಲೋಮೀಟರ್ ಉದ್ದದ ಮಹತ್ವಾಕಾಂಕ್ಷಿ ರೈಲು ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ‘ನಿರಾಸಕ್ತಿ’ಯ ಫೇರೆ ಅಡ್ಡಿಯಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಾಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಬಜೆಟ್ ವಿಶ್ಲೇಷಣೆ ಹಾಗೂ ರಾಜ್ಯದ ಯೋಜನೆಗಳ ಅನುಷ್ಠಾನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಬೆಳಗಾವಿಯ ರೈಲು ಯೋಜನೆಯ ಕುರಿತು ವೈಯಕ್ತಿಕವಾಗಿ ರಾಜ್ಯದ ಸಚಿವರನ್ನು ಮತ್ತು ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೆ ರಾಜ್ಯ ಸರ್ಕಾರದ ಕಡೆಯಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಕಾಂಗ್ರೆಸ್ ನಾಯಕರು ಪಕ್ಷಪಾತದ ರಾಜಕಾರಣವನ್ನು ಬದಿಗಿಟ್ಟು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು,” ಎಂದು ಅವರು ಆಗ್ರಹಿಸಿದರು.
2026ರ ಕೇಂದ್ರ ಬಜೆಟ್ ಕೇವಲ ಒಂದು ವರ್ಷದ ಲೆಕ್ಕಾಚಾರವಲ್ಲ, ಅದು 2047ರ ಹೊತ್ತಿಗೆ ಭಾರತವನ್ನು ಸುಧಾರಿತ ರಾಷ್ಟ್ರವನ್ನಾಗಿ ಮಾಡುವ ದೂರದೃಷ್ಟಿಯ ಯೋಜನೆ ಎಂದು ಸೋಮಣ್ಣ ಬಣ್ಣಿಸಿದರು.
ರಕ್ಷಣಾ ವಲಯ: 7.85 ಲಕ್ಷ ಕೋಟಿ ರೂ. ಹಂಚಿಕೆ.
ಶಿಕ್ಷಣ ಮತ್ತು ಕೃಷಿ: ಕೃಷಿಗೆ 1.63 ಲಕ್ಷ ಕೋಟಿ ರೂ. ಹಾಗೂ ಶಿಕ್ಷಣಕ್ಕೆ 1.39 ಲಕ್ಷ ಕೋಟಿ ರೂ. ಮೀಸಲು.
ರಾಜ್ಯದ ರೈಲ್ವೆ ಯೋಜನೆಗಳಿಗೆ 7,748 ಕೋಟಿ ರೂ. ಹಾಗೂ ವಿಪತ್ತು ನಿರ್ವಹಣೆಗೆ 8,559 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗಳು ಆಧಾರರಹಿತ ಎಂದು ಅವರು ಸ್ಪಷ್ಟಪಡಿಸಿದರು.
ಗ್ರಾಮೀಣ ಮೂಲಸೌಕರ್ಯಕ್ಕೆ 1 ಲಕ್ಷ ಕೋಟಿ ರೂ., MSME ವಲಯಕ್ಕೆ 10,000 ಕೋಟಿ ರೂ. ಹಾಗೂ ಸೆಮಿಕಂಡಕ್ಟರ್ ಮಿಷನ್ 2.0 ಅಡಿಯಲ್ಲಿ 40,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಇದು ದೇಶದ ಆರ್ಥಿಕತೆಯನ್ನು ಬಲಪಡಿಸಲಿದೆ ಎಂದರು. ಅಲ್ಲದೆ, 700 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ಸೌಲಭ್ಯ ಹಾಗೂ 15,000 ಮಾಧ್ಯಮಿಕ ಶಾಲೆಗಳ ಆಧುನೀಕರಣಕ್ಕೆ ಬಜೆಟ್ ಒತ್ತು ನೀಡಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವ ಜನಾಂಗದವರನ್ನು ಸಮಾನವಾಗಿ ಕಾಣುವ ಬದಲು, ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿ ಯೋಜನೆಗಳನ್ನು ನೀಡುತ್ತಿದ್ದಾರೆ. ದೀರ್ಘಕಾಲ ಸಿಎಂ ಆಗಿ ಕೆಲಸ ಮಾಡಿದ ಅನುಭವವಿದ್ದರೂ, ಅವರ ಈ ರೀತಿಯ ಆಡಳಿತ ಶೈಲಿ ಖೇದಕರ,” ಎಂದು ಟೀಕಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ ಹಾಗೂ ರಮೇಶ ಕತ್ತಿ ಸೇರಿದಂತೆ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.



