ಹೊಸ ದಿಗಂತ ವರದಿ, ಮುಂಡಗೋಡ:
ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಅವರು, ಸೋಮವಾರ ಧರ್ಮಶಾಲಾದತ್ತ ಪ್ರಯಾಣ ಬೆಳೆಸಲಿದ್ದಾರೆ. ಕಳೆದ ವರ್ಷ ಡಿ.೧೨ರಂದು ತಾಲೂಕಿನ ಟಿಬೆಟಿಯನ್ ಕ್ಯಾಂಪ್‌ಗೆ ಆಗಮಿಸಿದ್ದ ದಲೈಲಾಮಾ ೫೮ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಿರುವುದುರು ಇದೇ ಮೊದಲ ಸಲವಾಗಿದೆ. ಹಿಮಾಚಲ ಪ್ರದೇಶದಲ್ಲಿ ಚಳಿ ಹೆಚ್ಚಾಗಿದೆ, ದೆಹಲಿಯಲ್ಲಿ ವಾತಾವರಣ ಕಲುಷಿತಗೊಂಡಿದೆ. ಆದರೆ, ಇಲ್ಲಿ ಸ್ವಚ್ಛ ವಾತಾವರಣ, ಶುದ್ಧ ಗಾಳಿ ಹಾಗೂ ಚಳಿ ಕಡಿಮೆ ಇರುವುದರಿಂದ, ದಲೈಲಾಮಾ ಅವರು ಇಷ್ಟೊಂದು ದಿನಗಳ ಕಾಲ ಇಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಕೇಂದ್ರ ಟಿಬೆಟಿಯನ್ ಆಡಳಿತ ದಕ್ಷಿಣ ವಲಯದ ಮುಖ್ಯ ಪ್ರತಿನಿಧಿ ಜಿಗ್ಮೆ ಸುಲ್ಟ್ರಿಮ್ ಹೇಳಿದರು.
ತಾಲೂಕಿನ ಟಿಬೆಟಿಯನ್ನ ಕಾಲೋನಿಗೆ ದಲೈಲಾಮಾ ೨೮ನೇ ಬಾರಿಗೆ ಭೇಟಿ ನೀಡಿದ್ದು, ಡಿ.೧೬ರಿಂದ ಆರಂಭಗೊಂಡು ಫೆ.೭ರವರೆಗೆ ಒಟ್ಟು ೧೩೬೭೫ ಜನರಿಗೆ ದಲೈಲಾಮಾ ಆಶೀರ್ವಾದ ನೀಡಿದ್ದಾರೆ. ೯೪೭೯ ಟಿಬೆಟಿಯನ್ ಹಾಗೂ ಹಿಮಾಲಯ ಪ್ರದೇಶದ ಬೌದ್ಧ ಅನುಯಾಯಿಗಳು, ೨೩೬೨ ಭಾರತೀಯರು, ೧೨೭೪ ವಿದೇಶಿಯರು, ೫೬೦ ಇತರೆ ಜನರು ದಲೈಲಾಮಾ ಅವರನ್ನು ಭೇಟಿಯಾಗಿದ್ದಾರೆ.
ʼಇಲ್ಲಿನ ವಾತಾವರಣ ಉತ್ತಮವಾಗಿದ್ದು, ದಲೈಲಾಮಾ ಅವರ ಆರೋಗ್ಯದ ದೃಷ್ಟಿಯಿಂದ ಹೇಳಿ ಮಾಡಿಸಿದಂತಿದೆ. ಟಿಬೆಟಿಯನ್ ಕ್ಯಾಂಪ್‌ನಲ್ಲಿ ಸ್ವಚ್ಛತೆಗೆ ಬಿಕ್ಕುಗಳು ಮೊದಲ ಆದ್ಯತೆ ನೀಡುತ್ತಾರೆ. ಇದರಿಂದ, ದಲೈಲಾಮಾ ಇಷ್ಟು ದಿನಗಳ ಕಾಲ ಇಲ್ಲಿ ತಂಗಲು ಪ್ರಮುಖ ಕಾರಣವಾಗಿದೆ. ನಿರಾಶ್ರಿತರಾಗಿ ಭಾರತಕ್ಕೆ ಬಂದಾಗ, ಪೂರ್ವಜರು ತಮ್ಮ ಜೊತೆ ಬೌದ್ಧ ಅಧ್ಯಯನದ ಗ್ರಂಥಗಳನ್ನು ತೆಗೆದುಕೊಂಡು ಬಂದಿದ್ದರು. ಇದರಿಂದ ನಳಂದಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಸಹಾಯವಾಗಿದೆ. ಮೂಲ ಪರಂಪರೆಯ ಶಿಕ್ಷಣ ನೀಡುವುದರಿಂದಲೇ, ಮಂಗೋಲಿಯಾ ಸಹಿತ ಇತರೆ ದೇಶಗಳ ಬೌದ್ಧ ಅನುಯಾಯಿಗಳು ಇಲ್ಲಿ ಬಂದು ಗೆಶೆ ಪದವಿ ಪಡೆಯುತ್ತಿದ್ದಾರೆ. ಗೆಶೆ ಪದವಿ ಪಡೆಯಲು ೧೫ರಿಂದ ೨೫ವರ್ಷಗಳ ಕಾಲ ಸಮಯ ಹಿಡಿಯುತ್ತದೆʼ ಎಂದು ಜಿಗ್ಮೆ ಸುಲ್ಟ್ರಿಮ್ ಹೇಳಿದರು.

ಇದೇ ಮೊದಲ ಬಾರಿಗೆ ದಲೈಲಾಮಾ ಅವರನ್ನು ಭೇಟಿಯಾಗಲು ಹಿಮಾಚಲ ಪ್ರದೇಶ, ಸಿಕ್ಕಿಂ, ಲಡಾಖ, ಅರುಣಾಚಲ ಪ್ರದೇಶ, ಲೇಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಅನುಯಾಯಿಗಳು ಬಂದಿದ್ದರು. ಎಲ್ಲರೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ನಿಗದಿತ ದಿನದಂದು ಭೇಟಿಯಾಗಿ, ಆಶೀರ್ವಾದ ಪಡೆದಿದ್ದಾರೆ. ಆನ್‌ಲೈನ್ ಅರ್ಜಿಗಳನ್ನು ಪರಿಶೀಲಿಸಲು, ನಿರ್ವಹಿಸಲು ಸಾಕಷ್ಟು ಶ್ರಮಿಸಲಾಗಿದೆ. ಬಹುತೇಕ ಅರ್ಜಿ ಸಲ್ಲಿಸಿದವರಿಗೆ ಅವಕಾಶ ಸಿಕ್ಕಿದೆ. ಕೆಲವು ಜನರಿಗೆ ಮಾತ್ರ ಅವಕಾಶ ಸಿಕ್ಕಿಲ್ಲ. ಆದರೆ, ಅವರು ನಿರಾಸೆ ಆಗುವುದು ಬೇಡ. ದಲೈಲಾಮಾ ಅವರ ವಾಸ್ತವ್ಯ ದಿನಗಳಂದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿದೆ. ಸ್ಥಳೀಯ ಮಾಧ್ಯಮಗಳಿಂದ ಹಿಡಿದರು ರಾಷ್ಟ್ರೀಯ ಮಾಧ್ಯಮಗಳವರೆಗೂ ಎಲ್ಲರೂ ದಲೈಲಾಮಾ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ್ದಾರೆ ಎಂದರು.
ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ದಲೈಲಾಮಾ ಅವರು ದಕ್ಷಿಣ ಭಾರತ ಪ್ರವಾಸ ಮಾಡುವ ಸಾಧ್ಯತೆಯಿದೆ. ಆದರೆ, ಯಾವ ಸ್ಥಳ ಎಂದು ಈಗಲೇ ನೀರ್ಧಾರ ಆಗುವುದಿಲ್ಲ. ದಲೈಲಾಮಾ ಅವರರಿಗೆ ಮಂಡಿ ನೋವಿದ್ದು ನಡೆದಾಡಲು ತುಸು ಕಷ್ಟವಾಗುತ್ತದೆ. ಅವರೇ ೧೩೦ ವರ್ಷಗಳ ಕಾಲ ಬದುಕುತ್ತೇನೆ ಎಂದು ಹೇಳಿದ್ದಾರೆ. ದೀರ್ಘಾಯುಷ್ಯರಾಗಿ ದಲೈಲಾಮಾ ತಮ್ಮ ಅನುಯಾಯಿಗಳಿಗೆ ನಿರಂತರ ಆಶೀರ್ವಚನ ನೀಡಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಂಪಾ ಲಾಮಾ ಇದ್ದರು.



