ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮಲಾನಾ-I ಜಲವಿದ್ಯುತ್ ಯೋಜನೆಯ ಕಾಫರ್ ಅಣೆಕಟ್ಟು ಕುಸಿದಿದೆ.
ಡ್ಯಾಂ ಕುಸಿತದಿಂದ ಕೆಳಗಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ನೀರಿನ ರಭಸಕ್ಕೆ ಕ್ರೇನ್, ಟ್ರಕ್, ರಾಕ್ ಬ್ರೇಕರ್ ಮತ್ತು ಕಾರು ಸೇರಿದಂತೆ ಅಣೆಕಟ್ಟು ಬಳಿ ಇದ್ದ ಭಾರೀ ಯಂತ್ರೋಪಕರಣಗಳು ಕೊಚ್ಚಿ ಹೋಗಿವೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ನಿರಂತರ ಮಳೆಯಿಂದಾಗಿ ಭುಂತರ್ ಬಳಿ ಬಿಯಾಸ್ ನದಿಯೊಂದಿಗೆ ವಿಲೀನಗೊಳ್ಳುವ ಪಾರ್ವತಿ ನದಿಯ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ.
ಇದಕ್ಕೂ ಮುನ್ನ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪಾಂಡೋಹ್ ಅಣೆಕಟ್ಟಿನ ಬಳಿ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಪರಿಣಾಮ ಈ ಮಾರ್ಗದಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.