ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಅಭಿಯಾನವನ್ನು ಟೀಮ್ ಇಂಡಿಯಾ ಜಯದೊಂದಿಗೆ ಆರಂಭಿಸಿದೆಯಾದರೂ, ಅಮೆರಿಕ ವಿರುದ್ಧದ ಈ ಗೆಲುವು ಭಾರತಕ್ಕೆ ಅಷ್ಟು ಸುಲಭವಾಗಿರಲಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 29 ರನ್ಗಳ ಅಂತರದಿಂದ ಜಯಗಳಿಸಿತು. ಆದರೆ, ಬ್ಯಾಟಿಂಗ್ ವೈಫಲ್ಯ ಮತ್ತು ಅನಗತ್ಯ ದಾಖಲೆಗಳು ತಂಡದ ಆತಂಕಕ್ಕೆ ಕಾರಣವಾಗಿವೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅಮೆರಿಕದ ಬೌಲರ್ಗಳು ಆರಂಭದಲ್ಲೇ ಶಾಕ್ ನೀಡಿದರು. ಪವರ್ಪ್ಲೇನ ಮೊದಲ 6 ಓವರ್ಗಳಲ್ಲಿ ಭಾರತ ಕಲೆಹಾಕಿದ್ದು ಕೇವಲ 46 ರನ್. ಇತಿಹಾಸದಲ್ಲೇ ಮೊದಲ ಬಾರಿಗೆ ಐಸಿಸಿ ಪೂರ್ಣ ಸದಸ್ಯತ್ವವಿಲ್ಲದ ರಾಷ್ಟ್ರದ ವಿರುದ್ಧ ಭಾರತ ಪವರ್ಪ್ಲೇನಲ್ಲಿ ಇಷ್ಟು ಕಡಿಮೆ ರನ್ ಗಳಿಸಿದೆ. ಅಷ್ಟೇ ಅಲ್ಲದೆ, ಅಸೋಸಿಯೇಟ್ ರಾಷ್ಟ್ರವೊಂದರ ಎದುರು ಮೊದಲ 6 ಓವರ್ಗಳಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡಿದ್ದು ಇದೇ ಮೊದಲು.
ಆರಂಭಿಕ ಆಘಾತದಿಂದ ಕಂಗೆಟ್ಟಿದ್ದ ತಂಡಕ್ಕೆ ಆಸರೆಯಾಗಿದ್ದು ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್. ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯ ಅಜೇಯ 84 ರನ್ ಗಳಿಸಿ ತಂಡದ ಮೊತ್ತವನ್ನು 161ಕ್ಕೆ ತಲುಪಿಸಿದರು.
162 ರನ್ಗಳ ಗುರಿಯನ್ನು ಬೆನ್ನತ್ತಿದ ಅಮೆರಿಕ ತಂಡ, ಭಾರತದ ಅನುಭವದ ಬೌಲಿಂಗ್ ಎದುರು ನಿಗದಿತ 20 ಓವರ್ಗಳಲ್ಲಿ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 29 ರನ್ಗಳ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಒಟ್ಟಾರೆಯಾಗಿ, ಗೆಲುವಿನ ಸಿಹಿ ನಡುವೆಯೂ ಪವರ್ಪ್ಲೇ ವೈಫಲ್ಯ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಮುಂದಿನ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ಗಳು ಈ ತಪ್ಪುಗಳನ್ನು ಸರಿಪಡಿಸಿಕೊಂಡು ಅಬ್ಬರಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.



