ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮ ಅದ್ಭುತ ರಿದಮ್‌ಗಳ ಮೂಲಕವೇ ಮೋಡಿ ಮಾಡಿದ್ದ ಖ್ಯಾತ ಡ್ರಮ್ ವಾದಕ ಮತ್ತು ಸಂಗೀತ ನಿರ್ದೇಶಕ ಡ್ರಮ್ಮರ್ ದೇವ (64) ಅವರು ತೀವ್ರ ಅನಾರೋಗ್ಯದಿಂದಾಗಿ ಭಾನುವಾರ (ಸೆ. 27) ಕೊನೆಯುಸಿರೆಳೆದಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ವಿಧಿವಶರಾಗಿದ್ದಾರೆ ಎಂದು ಕಟುಂಬದ ಮೂಲಗಳು ತಿಳಿಸಿವೆ.
ಆರಂಭಿಕ ದಿನಗಳಲ್ಲಿ ಕೇವಲ ಸಂಗೀತ ವಾದ್ಯಗಳನ್ನು ಒರೆಸುವ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ ದೇವ್ ಅವರು, ತಮ್ಮ ಕಠಿಣ ಪರಿಶ್ರಮ ಮತ್ತು ಸಂಗೀತದ ಮೇಲಿನ ಅಪಾರ ಪ್ರೀತಿಯಿಂದಾಗಿ ದೇಶವೇ ಮೆಚ್ಚುವಂತಹ ತಬಲಾ ಹಾಗೂ ಡ್ರಮ್ಸ್ ವಾದಕರಾಗಿ ಮುಂಚೂಣಿಗೆ ಬಂದರು.
ಸಿನಿಮಾ ಪಯಣ
ಮಹಾನ್ ಸಂಗೀತ ಮಾಂತ್ರಿಕ ಇಳಯರಾಜ ಸೇರಿದಂತೆ ದಕ್ಷಿಣ ಭಾರತದ ಹಿರಿಯ ಸಂಗೀತ ನಿರ್ದೇಶಕರ ತಂಡಗಳಲ್ಲಿ ದೇವ ಕಾರ್ಯನಿರ್ವಹಿಸಿದ್ದರು. ಕನ್ನಡದ ನಾದಬ್ರಹ್ಮ ಹಂಸಲೇಖ ಹಾಗೂ ಸಾಧು ಕೋಕಿಲ ಅವರ ಜನಪ್ರಿಯ ಆರ್ಕೆಸ್ಟ್ರಾ ವೇದಿಕೆಗಳಿಗೆ ಇವರೇ ಮುಖ್ಯ ರಿದಮ್ ಬೆಂಬಲವಾಗಿದ್ದರು. ವಾದಕರಾಗಿ ಮಾತ್ರವಲ್ಲದೆ ‘5 ಈಡಿಯಟ್ಸ್’ ಹಾಗೂ ‘ಪ್ರೀತಿ ನೀ ಹೀಂಗ್ಯಾಕೆ’ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಸುಮಾರು 300ಕ್ಕೂ ಹೆಚ್ಚು ಹಾಡುಗಳಲ್ಲಿ ಡ್ರಮ್ಸ್ ಬಾರಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ನೆಚ್ಚಿನ ‘ಆರ್ಸಿಬಿ ಬೂಸ್ಟರ್’
ಕೇವಲ ಸಿನಿಮಾರಂಗ ಮಾತ್ರವಲ್ಲದೆ ಕ್ರೀಡಾಲೋಕದಲ್ಲೂ ದೇವ್ ಹೆಸರುವಾಸಿಯಾಗಿದ್ದರು. ಐಪಿಎಲ್ ಕ್ರಿಕೆಟ್ ಸರಣಿ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಯಾಗಿದ್ದ ಇವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಪಂದ್ಯದಲ್ಲೂ ಲೈವ್ ಆಗಿ ಡ್ರಮ್ಸ್ ಬಾರಿಸುವ ಮೂಲಕ ಗ್ಯಾಲರಿಯಲ್ಲಿದ್ದ ಇಡೀ ಕ್ರೀಡಾಭಿಮಾನಿಗಳಲ್ಲಿ ಹೊಸ ಜೋಶ್ ತುಂಬುತ್ತಿದ್ದರು.
ಕೊನೆಯ ದಿನಗಳ ಹೋರಾಟ
ಕಳೆದ ಕೆಲವು ತಿಂಗಳುಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಗ್ಯಾಂಗ್ರಿನ್ ಕಾಣಿಸಿಕೊಂಡಿದ್ದರಿಂದ, ಶಸ್ತ್ರಚಿಕಿತ್ಸೆ ನಡೆಸಿ ಬಲಗಾಲನ್ನು ಕತ್ತರಿಸಲಾಗಿತ್ತು. ಇಷ್ಟಾದರೂ ಕೃತಕ ಕಾಲಿನ ನೆರವಿನಿಂದ ಮತ್ತು ಆಸ್ಪತ್ರೆಯ ಬೆಡ್ ಮೇಲಿದ್ದಾಗಲೂ ಡ್ರಮ್ಸ್ ಸ್ಟಿಕ್ ಹಿಡಿದು ನುಡಿಸುವ ಮೂಲಕ ಸಂಗೀತದ ಮೇಲಿನ ತಮ್ಮ ಬದ್ಧತೆಯನ್ನು ಮೆರೆದಿದ್ದರು. ಇತ್ತೀಚೆಗೆ ಸ್ಟ್ರೋಕ್ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ದೇವ್ ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.



