September 27, 2026
Sunday, September 27, 2026
spot_img

ಉಕ್ರೇನ್ ಯುದ್ಧಭೂಮಿಗೆ 14ನೇ ಶತಮಾನದ ರಾಜಕುಮಾರನ ದೇಹದ ಅವಶೇಷ ರವಾನೆ: ಅಚ್ಚರಿ ಮುಡಿಸಿದೆ ರಷ್ಯಾ ನಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಉಕ್ರೇನ್ ವಿರುದ್ಧದ ಯುದ್ಧ ಮುಂದುವರಿದಿರುವ ಬೆನ್ನಲ್ಲೇ ರಷ್ಯಾದ ಆರ್ಥಡಾಕ್ಸ್ ಚರ್ಚ್, ಮಧ್ಯಯುಗದ ಯೋಧ ರಾಜಕುಮಾರನ ದೇಹದ ಅವಶೇಷದ ಒಂದು ಭಾಗವನ್ನು ರಷ್ಯಾ ಸೈನಿಕರ ಬಳಿಗೆ ರವಾನಿಸಿರುವುದು ಇದೀಗ ವಿಶ್ವದ ಗಮನ ಸೆಳೆದಿದೆ.


14ನೇ ಶತಮಾನದಲ್ಲಿದ್ದ ಮಾಸ್ಕೋ ರಾಜಕುಮಾರ ದಿಮಿತ್ರಿ ದೋನ್ಸ್ಕೊಯ್ ಅವರ ಬಲಗೈಯ ಅವಶೇಷದ ಒಂದು ತುಣುಕನ್ನು ಇದೀಗ ರಷ್ಯಾ ಪಡೆಗಳು ಇರುವ ಪ್ರದೇಶಕ್ಕೆ ಕಳುಹಿಸಲಾಗಿದೆ. 1380ರ ಕುಲಿಕೊವೊ ಕದನದಲ್ಲಿ ಮಂಗೋಲ್ ಗೋಲ್ಡನ್ ಹಾರ್ಡ್ ವಿರುದ್ಧದ ಗೆಲುವು ಪಡೆಯುವುದರೊಂದಿಗೆ ದಿಮಿತ್ರಿ ರಷ್ಯಾದ ಇತಿಹಾಸದಲ್ಲಿ ಅಪ್ರತಿಮ ಯೋಧ ರಾಜಕುಮಾರನಾಗಿ ಗುರುತಿಸಿಕೊಂಡಿದ್ದಾರೆ. ರಷ್ಯಾದ ಆರ್ಥಡಾಕ್ಸ್ ಚರ್ಚ್ ಅವರನ್ನು ಸಂತನಾಗಿಯೂ ಗೌರವಿಸುತ್ತದೆ. ಚರ್ಚ್‌ನ ಮಿಲಿಟರಿ ವಿಭಾಗದ ಪ್ರಕಾರ, ದಿಮಿತ್ರಿ ಅವರ ದೇಹದ ಅವಶೇಷದ ಭಾಗವು ರಷ್ಯಾ ಸೈನಿಕರೊಂದಿಗೆ ‘ಭುಜಕ್ಕೆ ಭುಜ’ವಾಗಿ ಇರುವ ಆಧ್ಯಾತ್ಮಿಕ ಸಂಕೇತವಾಗಿದೆ. ಆತನ ಕತ್ತಿಯನ್ನು ಹಿಡಿದಿದ್ದ ಬಲಗೈಯ ಭಾಗವೇ ಇದೀಗ ಸೈನಿಕರ ಬಳಿಗೆ ಕೊಂಡೊಯ್ಯಲಾಗಿದೆ ಎಂದು ಚರ್ಚ್ ತಿಳಿಸಿದೆ. ಈ ಅವಶೇಷವನ್ನು ರಷ್ಯಾ ಆಕ್ರಮಿತ ಉಕ್ರೇನ್‌ನಲ್ಲಿರುವ ವಿವಿಧ ಸೇನಾ ನೆಲೆಗಳಿಗೆ ಕೊಂಡೊಯ್ಯಲಾಗುತ್ತಿದೆ. ಈ ವರ್ಷದ ಆರಂಭದಲ್ಲಿಯೂ ಮತ್ತೊಬ್ಬ ಮಧ್ಯಯುಗದ ರಷ್ಯನ್ ರಾಜಕುಮಾರ ಹಾಗೂ ಯೋಧ ಸಂತ ಅಲೆಕ್ಸಾಂಡರ್ ನೆವ್ಸ್ಕಿಯ ಅವಶೇಷಗಳನ್ನು ಸೈನಿಕರ ಬಳಿಗೆ ಕೊಂಡೊಯ್ಯಲಾಗಿತ್ತು.


ಅವಶೇಷ ಏಕೆ ಯುದ್ಧಭೂಮಿಗೆ?


ರಷ್ಯಾದ ಆರ್ಥಡಾಕ್ಸ್ ಚರ್ಚ್ ಪ್ರಕಾರ, ಇಂತಹ ಪವಿತ್ರ ಅವಶೇಷಗಳು ಸೈನಿಕರಿಗೆ ಆಧ್ಯಾತ್ಮಿಕ ಹಾಗೂ ನೈತಿಕ ಬಲ ನೀಡುವ ಉದ್ದೇಶ ಹೊಂದಿವೆ. ಈ ಅವಶೇಷಗಳ ಉಪಸ್ಥಿತಿಯು ಸೈನಿಕರು ಹಾಗೂ ನಾಗರಿಕರಿಗೆ ತಮ್ಮ ಆಧ್ಯಾತ್ಮಿಕ ಮತ್ತು ದೈಹಿಕ ಶಕ್ತಿಯನ್ನು ಒಗ್ಗೂಡಿಸಲು ನೆರವಾಗಲಿದೆ, ದಿಮಿತ್ರಿ ದೇಹದ ಅವಶೇಷಗಳು ಈ ವರ್ಷದ ಆಗಸ್ಟ್‌ನಲ್ಲಿ ಮಾಸ್ಕೋದ ಕ್ರೆಮ್ಲಿನ್‌ನಲ್ಲಿರುವ ಆರ್ಚಾಂಜೆಲ್ ಕ್ಯಾಥೆಡ್ರಲ್‌ನಲ್ಲಿ ನಡೆದ ಪುನರ್‌ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಪತ್ತೆಯಾಗಿದ್ದವು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು ಅಪರೂಪದ ಮತ್ತು ಮಹತ್ವದ ಶೋಧ ಎಂದು ಬಣ್ಣಿಸಿದ್ದರು. ರಷ್ಯಾದ ಆರ್ಥಡಾಕ್ಸ್ ಚರ್ಚ್‌ನ ಪ್ಯಾಟ್ರಿಯಾರ್ಕ್ ಕಿರಿಲ್ ಇದನ್ನು ದೇವರ ವಿಶೇಷ ಸಂಕೇತ ಎಂದು ವ್ಯಾಖ್ಯಾನಿಸಿದ್ದರು.


2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದ ಬಳಿಕ ರಷ್ಯಾ ಸರ್ಕಾರ ಮತ್ತು ಆರ್ಥಡಾಕ್ಸ್ ಚರ್ಚ್ ನಡುವಿನ ಸಂಬಂಧ ಮತ್ತಷ್ಟು ನಿಕಟವಾಗಿದೆ. ಯುದ್ಧದ ಸಂದರ್ಭದಲ್ಲಿ ಧಾರ್ಮಿಕ ಭಾಷೆ ಮತ್ತು ಐತಿಹಾಸಿಕ ಯೋಧರ ಸಂಕೇತಗಳನ್ನು ಬಳಸಲಾಗುತ್ತಿದೆ ಎಂದು ಧರ್ಮ ಹಾಗೂ ಇತಿಹಾಸ ತಜ್ಞರು ಹೇಳಿದ್ದಾರೆ.


ಆದರೆ ಈ ಕ್ರಮದ ಬಗ್ಗೆ ಆರ್ಥಡಾಕ್ಸ್ ಸಮುದಾಯದಲ್ಲೇ ಭಿನ್ನಾಭಿಪ್ರಾಯಗಳಿವೆ. ಕೆಲವು ಧಾರ್ಮಿಕ ಮುಖಂಡರು ಪವಿತ್ರ ಅವಶೇಷಗಳನ್ನು ಯುದ್ಧದ ರಾಜಕೀಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

Must Read