ಮಳೆಗಾಲದಲ್ಲಿ ಪ್ರಕೃತಿ ಹಸಿರು ಹೊದಿಕೆ ಹೊದ್ದಂತೆ ಕಾಣುತ್ತದೆ. ಬೇಸಿಗೆಯಲ್ಲಿ ಬಿಸಿಯಿಂದ ಒಣಗಿದ್ದ ಗಿಡಗಳು ಈ ಕಾಲದಲ್ಲಿ ಪುನರುಜ್ಜೀವನ ಪಡೆಯುತ್ತವೆ. ಮಳೆಗಾಲವು ಕೇವಲ ತಂಪು ವಾತಾವರಣಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಬೀಜ ಬಿತ್ತನೆ ಮತ್ತು ಸಸಿಗಳನ್ನು ನೆಡುವ ಅತ್ಯುತ್ತಮ ಸಮಯವೂ ಹೌದು. ಇತ್ತೀಚಿನ ದಿನಗಳಲ್ಲಿ ತರಕಾರಿಗಳ ಮೇಲೆ ಹೆಚ್ಚುತ್ತಿರುವ ಕೀಟನಾಶಕ ಬಳಕೆಯಿಂದ ಆರೋಗ್ಯದ ಮೇಲೆ ಹಾನಿಕರ ಪರಿಣಾಮಗಳು ಉಂಟಾಗುತ್ತಿರುವುದರಿಂದ, ಅನೇಕರು ಮನೆಯಲ್ಲಿಯೇ ಸಾವಯವ ವಿಧಾನದಲ್ಲಿ ತರಕಾರಿಗಳನ್ನು ಬೆಳೆಸಲು ಮುಂದಾಗಿದ್ದಾರೆ.
ಟೊಮೆಟೊ
ಮಳೆಗಾಲದಲ್ಲಿ ಚೆರ್ರಿ ಟೊಮೆಟೊ ಸೇರಿದಂತೆ ವಿವಿಧ ಬಗೆಯ ಟೊಮೆಟೊಗಳನ್ನು ಸುಲಭವಾಗಿ ಬೆಳೆಸಬಹುದು. 6-7 ಗಂಟೆಗಳ ಸೂರ್ಯನ ಬೆಳಕು ಮತ್ತು ತೇವಾಂಶಯುಕ್ತ ಮಣ್ಣು ಉತ್ತಮ ಬೆಳವಣಿಗೆಗೆ ನೆರವಾಗುತ್ತದೆ. ಬಿತ್ತನೆ ಮಾಡಿದ 60 ದಿನಗಳಲ್ಲೇ ಫಲ ನೀಡಲು ಆರಂಭಿಸುತ್ತವೆ.
ಹಸಿರು ಎಲೆ ತರಕಾರಿಗಳು
ಪಾಲಕ್, ಮೆಂತ್ಯ, ಕೊತ್ತಂಬರಿ ಹೀಗೆ ಹಸಿರು ಎಲೆ ತರಕಾರಿಗಳು ಮಳೆಗಾಲದಲ್ಲಿ ವೇಗವಾಗಿ ಬೆಳೆಯುತ್ತವೆ. ಒಂದೇ ಋತುವಿನಲ್ಲಿ ಹಲವು ಬಾರಿ ಕೊಯ್ಲು ಮಾಡಬಹುದಾದ ಇವು, ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಆಹಾರಕ್ಕೆ ಉತ್ತಮ ಆಯ್ಕೆಯಾಗಿದೆ.
ಬೆಂಡೆಕಾಯಿ
ಮಳೆಗಾಲಕ್ಕೆ ಸೂಕ್ತವಾದ ಬೆಂಡೆಕಾಯಿ ಗಿಡಗಳು ತ್ವರಿತ ಬೆಳವಣಿಗೆಯೊಂದಿಗೆ ಹೆಚ್ಚಿನ ಫಲ ನೀಡುತ್ತವೆ. ನೆಲದಲ್ಲೂ, ಕುಂಡಗಳಲ್ಲೂ ಅಥವಾ ಟೆರೇಸ್ ತೋಟದಲ್ಲೂ ಬೆಳೆಸಬಹುದು.
ಸೌತೆಕಾಯಿ
ತೇವಾಂಶಯುಕ್ತ, ಫಲವತ್ತಾದ ಮಣ್ಣು ಮತ್ತು ಸಾಕಷ್ಟು ಸೂರ್ಯನ ಬೆಳಕು ಸೌತೆಕಾಯಿ ಬೆಳವಣಿಗೆಗೆ ಅವಶ್ಯಕ. ಬೀಜಗಳನ್ನು 1 ಇಂಚು ಆಳದಲ್ಲಿ, 2-3 ಇಂಚು ಅಂತರದಲ್ಲಿ ನೆಟ್ಟರೆ ಉತ್ತಮ ಫಸಲು ಸಿಗುತ್ತದೆ.
ಬೀನ್ಸ್
ಮಳೆಗಾಲದಲ್ಲಿ ಬೆಳೆಸಲು ಸೂಕ್ತವಾದ ಬೀನ್ಸ್ ಸಸಿಗಳು ನವೆಂಬರ್-ಡಿಸೆಂಬರ್‌ನಲ್ಲಿ ಹೂ ಬಿಡುತ್ತವೆ ಮತ್ತು ಜನವರಿ-ಫೆಬ್ರವರಿಯಲ್ಲಿ ಕೊಯ್ಲಿಗೆ ಸಿದ್ಧವಾಗುತ್ತವೆ. ಜೇಡಿ ಮಣ್ಣಿನಲ್ಲಿ ಉತ್ತಮ ಬೆಳವಣಿಗೆ ಕಾಣಿಸುತ್ತವೆ.
ಮೂಲಂಗಿ
ತ್ವರಿತ ಬೆಳವಣಿಗೆಯ ಮೂಲಂಗಿಯನ್ನು ಮಳೆಗಾಲದಲ್ಲಿ ನೇರವಾಗಿ ನೆಲದಲ್ಲಿ ಬಿತ್ತಬಹುದು. ಕೆಲವೇ ವಾರಗಳಲ್ಲಿ ಕೊಯ್ಲಿಗೆ ಸಿದ್ಧವಾಗುವ ಇವುಗಳಿಗೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ.
ಇವುಗಳ ಹೊರತಾಗಿ ಕರಿಬೇವು, ಕ್ಯಾರೆಟ್, ಬೀಟ್ರೂಟ್, ಸೋರೆಕಾಯಿ, ಹಸಿಮೆಣಸು, ಪುದೀನಾ, ಬದನೆಕಾಯಿ ಮುಂತಾದ ತರಕಾರಿಗಳನ್ನು ಕೂಡ ಮಳೆಗಾಲದಲ್ಲಿ ಮನೆಯ ಹಿತ್ತಲಲ್ಲಿ ಅಥವಾ ಟೆರೇಸ್ ತೋಟದಲ್ಲಿ ಸುಲಭವಾಗಿ ಬೆಳೆಯಬಹುದು.