ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ರೇವಾದಲ್ಲಿ ಆಡಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರು ತಮ್ಮ ಮಗನ ಮದುವೆ ಕಾರ್ಡ್‌ಗಳನ್ನು ವಿತರಿಸಲು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೃತಪಟ್ಟವರಲ್ಲಿ ವರನ ತಂದೆ, ಸಹೋದರ ಮತ್ತು ಮಹಿಳಾ ಸಂಬಂಧಿಯೂ ಇದ್ದಾರೆ.
ಅಪಘಾತದ ನಂತರ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ರೇವಾದ ರಾಯ್‌ಪುರ್ ಕರ್ಚುಲಿಯನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ತಮ್ಮ ಮಗನ ಮದುವೆ ಕಾರ್ಡ್‌ಗಳನ್ನು ವಿತರಿಸಲು ಹೋಗುತ್ತಿದ್ದಾಗ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಡಿ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಬೈಕ್ ಮತ್ತು ಕಾರು ಎರಡೂ ಜಖಂಗೊಂಡಿದ್ದು ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಾಚೈ ನಿವಾಸಿ ಭಗವತ್ ವಿಶ್ವಕರ್ಮ ಅವರ ಪುತ್ರ ಶುಭಮ್ ವಿಶ್ವಕರ್ಮ ಫೆಬ್ರವರಿ 24ರಂದು ವಿವಾಹವಾಗಬೇಕಿತ್ತು. ಭಗವತ್ ಮತ್ತು ಅವರ ಮತ್ತೊಬ್ಬ ಮಗ ಶಿವಂ ವಿಶ್ವಕರ್ಮ ಮದುವೆ ಕಾರ್ಡ್‌ಗಳನ್ನು ವಿತರಿಸಲು ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದರು. ಅವರ ಮಹಿಳಾ ಸಂಬಂಧಿ ಗರ್ ಕತ್ರಾದ ಘುಮಾ ಗ್ರಾಮದ ನಿವಾಸಿ ಶೀತಲ್ ವಿಶ್ವಕರ್ಮ ಕೂಡ ಅವರೊಂದಿಗೆ ಸವಾರಿ ಮಾಡುತ್ತಿದ್ದರು. ರೇವಾದಿಂದ ವೇಗವಾಗಿ ಬರುತ್ತಿದ್ದ ಆಡಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದರು.



