October 21, 2026
Wednesday, October 21, 2026
spot_img

ಅಕ್ಕಿ ಸಾಗಿಸುವ ವಾಹನ ಅಡ್ಡಗಟ್ಟಿ ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಬೆಳಗಾವಿ:

ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದ ಬಸ್ತವಾಡ ಕ್ರಾಸ್ ಬಳಿ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಚಾಲಕನಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಐವರು ಸ್ವಯಂಘೋಷಿತ ಯುಟ್ಯೂಬ್ ಪತ್ರಕರ್ತರ ವಿರುದ್ಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ರವಿ ಕರಬರೆ, ಎಸ್.ಆರ್. ಜಮಾದಾರ, ಮಣಿಕಂಠ ಮೌಡಿ, ಪ್ರಕಾಶ ಚಿಗರಿ ಹಾಗೂ ರೌವುಫ್ ದೇಸಾಯಿ ಆರೋಪಿಗಳಾಗಿದ್ದಾರೆ.

ಎರಡು ದಿನಗಳ ಹಿಂದೆ ಬೆಳಗ್ಗೆ 7 ಗಂಟೆ ಸುಮಾರಿಗೆ ಹುಕ್ಕೇರಿ-ಬೆಳಗಾವಿ ರಸ್ತೆಯ ಬಸ್ತವಾಡ ಕ್ರಾಸ್ ಬಳಿ ಘಟನೆ ನಡೆದಿದೆ. ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಆರೋಪಿಗಳು, ಸಾಗಣೆಯ ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿ, ಇಲ್ಲದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ವಾಹನ ಚಾಲಕ ಅರ್ಜುನವಾಡದ ಅಮಿತ ಸುರೇಶ ಅಂಬಲಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read