ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಟ್ರಕ್ಗೆ ಎಲೆಕ್ಟ್ರಿಕ್ ಕಾರು ಡಿಕ್ಕಿಯಾದ ಪರಿಣಾಮ ಮಹಿಳೆ ಮತ್ತು ಅವರ ಐದು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಗುಜರಾತ್ನ ವಡೋದರಾ ಜಿಲ್ಲೆಯ ಪಾದ್ರಾ ಬಳಿ ಈ ಘೋರ ದುರಂತ ನಡೆದಿದೆ. ಅಪಘಾತದ ತೀವ್ರತೆಗೆ ವಿಂಡಸರ್ ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸ್ಥಳದಲ್ಲೇ ತಾಯಿ-ಮಗು ಸಾವು
ಕಾರಿನಲ್ಲಿದ್ದ ಕುಟುಂಬಸ್ಥರು ಅಹಮದಾಬಾದ್ನಿಂದ ಸೂರತ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಹೆದ್ದಾರಿ ಪಕ್ಕದಲ್ಲಿ ರಿಪೇರಿಗಾಗಿ ನಿಲ್ಲಿಸಲಾಗಿದ್ದ ಟ್ರಕ್ನ ಹಿಂಭಾಗಕ್ಕೆ ಕಾರು ಅತಿ ವೇಗವಾಗಿ ಬಂದು ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಮಹಿಳೆ ಮತ್ತು ಅವರ ಐದು ವರ್ಷದ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:
ರಕ್ಷಣಾ ಸಿಬ್ಬಂದಿಯ ಹರಸಾಹಸ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕಾರಿನ ಮಧ್ಯೆ ಸಿಲುಕಿಕೊಂಡಿದ್ದವರನ್ನು ಹೊರತೆಗೆದು, ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಆ ಟ್ರಕ್ ಕಳೆದ ಎರಡು ದಿನಗಳಿಂದ ಹೆದ್ದಾರಿಯ ಪಕ್ಕದಲ್ಲೇ ನಿಂತಿತ್ತು ಎನ್ನಲಾಗಿದೆ. ಅಷ್ಟು ವೇಗವಾಗಿ ವಾಹನಗಳು ಚಲಿಸುವ ಎಕ್ಸ್ಪ್ರೆಸ್ವೇನಲ್ಲಿ ಟ್ರಕ್ ನಿಲ್ಲಿಸುವಾಗ ಯಾವುದೇ ಸುರಕ್ಷತಾ ಸೂಚಕ ಫಲಕಗಳನ್ನು ಹಾಕಲಾಗಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



