ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮತ್ತು ಮಹಿಳೆಯ ಜೊತೆ ದುರ್ವರ್ತನೆ ತೋರಿದ ಆರೋಪದ ಮೇಲೆ ಕೇರಳದ ಕಾಂಗ್ರೆಸ್ ಶಾಸಕ ರಾಹುಲ್ ಮಮಕೂಟಥಿಲ್ ಗುರುವಾರ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮೇಲೆ ಕೇಳಿಬಂದಿರುವ ಆರೋಪದ ಮೇಲೆ ಮಾತನಾಡಿ ಪಕ್ಷ ಮತ್ತು ನಮ್ಮ ನಾಯಕರ ಸಮಯವನ್ನು ವೃಥಾ ಹಾಳು ಮಾಡಲು ಇಷ್ಟವಿಲ್ಲದೆ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.
ಕೆಪಿಸಿಸಿ ಮತ್ತು ಎಐಸಿಸಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ನನ್ನ ರಾಜೀನಾಮೆಗೆ ಒತ್ತಾಯಿಸಲಿಲ್ಲ. ಆರೋಪ ಮಾಡಿರುವ ನಟಿಯು ನನ್ನ ಸ್ನೇಹಿತೆ. ಅವರು ಹೇಳಿದ ವ್ಯಕ್ತಿ ನಾನೇ ಎಂದು ನಂಬುವುದಿಲ್ಲ. ಅವರು ನನ್ನ ಉತ್ತಮ ಸ್ನೇಹಿತೆಯಾಗಿಯೇ ಇರುತ್ತಾರೆ. ದೇಶದ ಕಾನೂನು ಅಥವಾ ಸಂವಿಧಾನಕ್ಕೆ ವಿರುದ್ಧವಾದ ಕೆಲಸ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಯುವ ಕಾಂಗ್ರೆಸ್ ನಾಯಕನ ವಿರುದ್ಧ ಕೇಳಿಬಂದ ಆರೋಪದ ಬೆನ್ನಲ್ಲೇ ಪಕ್ಷವು ಆಂತರಿಕ ತನಿಖೆಗೆ ಮುಂದಾಗಿದೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ ಅವರು ತಪ್ಪಿತಸ್ಥರೆಂದು ಕಂಡುಬಂದ ಯಾರನ್ನೂ ಬಿಡುವುದಿಲ್ಲ. ನಟಿಯು ನನ್ನ ಮಗಳು ಇದ್ದ ಹಾಗೆ. ಆಕೆಗೆ ಕಿರುಕುಳ ನೀಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಟಿಯ ಆರೋಪವೇನು?
ಮಲಯಾಳಂ ಚಿತ್ರ ನಟಿ ರಿನಿ ಜಾರ್ಜ್ ಅವರು ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಮತ್ತು ದುರ್ವರ್ತನೆ ತೋರುತ್ತಿದ್ದಾನೆ ಎಂದು ಹೆಸರು ಪ್ರಸ್ತಾಪಿಸದೆ ಆರೋಪಿಸಿದ್ದಾರೆ. ಒಬ್ಬ ಮುಖಂಡನಿಂದ ತನಗೆ ನಿರಂತರ ಹಿಂಸೆಯಾಗುತ್ತಿದೆ. ಹಿಂದೆಯೂ ಆತ ಸಾಕಷ್ಟು ಕಹಿ ಅನುಭವ ನೀಡಿದ್ದಾನೆ. ಈ ವ್ಯಕ್ತಿ ಇತ್ತೀಚೆಗೆ ಜನಪ್ರತಿನಿಧಿಯಾಗಿಯೂ ಆಯ್ಕೆಯಾಗಿದ್ದಾನೆ ಎಂದು ದೂರಿದ್ದರು.