February 9, 2026
Monday, February 9, 2026
spot_img

ನಡುರಸ್ತೆಯಲ್ಲೇ ಕಿಡ್ನ್ಯಾಪ್‌ಗೆ ಯತ್ನ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ!

ಹೊಸದಿಗಂತ ಕಲಬುರಗಿ:

ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಹೊಟ್ಟೆಪಾಡಿಗಾಗಿ ಚಿಂದಿ ಆಯುವ ಅಸಹಾಯಕ ಮಹಿಳೆಯೊಬ್ಬರ ಮೇಲೆ ಕಿರಾತಕರ ಗುಂಪೊಂದು ಅತ್ಯಾಚಾರಕ್ಕೆ ಯತ್ನಿಸಿ, ವಿಫಲವಾದಾಗ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ನಗರದ ಹೊರವಲಯದಲ್ಲಿ ಎಂದಿನಂತೆ ತನ್ನ ಪಾಡಿಗೆ ತಾನು ಚಿಂದಿ ಆಯುತ್ತಿದ್ದ ಮಹಿಳೆಯನ್ನು ಕಂಡ ಯುವಕರ ತಂಡವೊಂದು ಕಾರಿನಲ್ಲಿ ಏಕಾಏಕಿ ಬಂದಿದೆ. ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡ ಈ ಕಾಮುಕರು, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಲು ಯತ್ನಿಸಿದ್ದಾರೆ. ಮಹಿಳೆಯನ್ನು ಎಳೆದಾಡಿ ಅತ್ಯಾಚಾರಕ್ಕೆ ಸಂಚು ರೂಪಿಸಿದ್ದ ಕಿರಾತಕರಿಂದ ತಪ್ಪಿಸಿಕೊಳ್ಳಲು ಮಹಿಳೆ ಜೋರಾಗಿ ಕಿರುಚಾಡಿದ್ದಾರೆ.

ಮಹಿಳೆಯ ಚೀರಾಟದಿಂದ ಕಂಗೆಟ್ಟ ಆರೋಪಿಗಳು, ಸ್ಥಳೀಯರು ನೆರೆಯಬಹುದೆಂಬ ಭಯದಿಂದ ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಕಿರಾತಕರ ಪೈಶಾಚಿಕ ಕೃತ್ಯದಿಂದಾಗಿ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ನಗರದ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ದೊರೆತಿರುವುದರಿಂದ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಾಜದ ಶಾಂತಿ ಕದಡಲು ಯತ್ನಿಸಿದ ಈ ಕಿರಾತಕರನ್ನು ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !