ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ವರ್ಷಗಳ ಹಿಂದೆ ನಡೆದ ಸಣ್ಣ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು 45 ವರ್ಷಗಳ ನಂತರ ಬಂಧಿಸಿದ ಘಟನೆ ನಡೆದಿದೆ.
1980ರಲ್ಲಿ ಖಾರ್ಗೋನ್ ಜಿಲ್ಲೆಯ ಬಾಲಸಮುದ್ ಕಾಕಡ್ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಸೇರಿ ಸುಮಾರು 100 ರೂಪಾಯಿ ಮೌಲ್ಯದ ಗೋಧಿ ಕದ್ದ ಪ್ರಕರಣದಲ್ಲಿ ಸಲೀಂ ಶೇಖ್ ಎಂಬಾತ ಭಾಗಿಯಾಗಿದ್ದನು. ಅಂದಿನ ಘಟನೆ ವೇಳೆ ಅವನು ಸುಮಾರು 20 ವರ್ಷದವನಾಗಿದ್ದು, ಇದೀಗ 65 ವರ್ಷ ವಯಸ್ಸಾಗಿದೆ.
ಇದನ್ನೂ ಓದಿ:
ಘಟನೆ ನಂತರ ಹಲವು ವರ್ಷಗಳಿಂದ ಆತ ಕಾನೂನಿನಿಂದ ತಪ್ಪಿಸಿಕೊಂಡು ಬೇರೆ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಪ್ರಕರಣದ ಮತ್ತೊಬ್ಬ ಆರೋಪಿ ಮೃತಪಟ್ಟಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಶೇಖ್ ಮಾತ್ರ ಧಾರ್ ಜಿಲ್ಲೆಯ ಬಾಗ್ ಪ್ರದೇಶದಲ್ಲಿ ನೆಲೆಸಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ವರ್ಷಗಳ ಹಿಂದೆ ನಡೆದ ಘಟನೆ ಮರೆತುಹೋಗಿದೆ ಎಂದು ಭಾವಿಸಿದ್ದ ಶೇಖ್‌ಗೆ, ದಶಕಗಳ ಬಳಿಕವೂ ಕಾನೂನು ತನ್ನನ್ನು ತಲುಪಿದೆ ಎಂಬುದು ಅಚ್ಚರಿ ಮೂಡಿಸಿದೆ.



