ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿಟ್ಟ ಕೇಸ್ ಸಂಬಂಧ ಅನಾಮಿಕ ದೂರುದಾರನ ವಿಚಾರಣೆ ಶುಕ್ರವಾರವು ಎಸ್. ಐ.ಟಿ. ಠಾಣೆಯಲ್ಲಿ ಮುಂದುವರೆಯಿತು.
ಪೊಲೀಸ್ ಎಸ್ಕಾರ್ಟ್ ನಲ್ಲಿ ಎಸ್.ಐ. ಟಿ ಠಾಣೆಗೆ ಆಗಮಿಸಿದ ಅನಾಮಿಕ ದೂರುದಾರರನ್ನು, ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ನೇತೃತ್ವದ ತಂಡ ಹೆಚ್ಚಿನ ವಿಚಾರಣೆ ನಡೆಸಿತು.
ದೂರುದಾರ ಗುರುತಿಸಿರುವ 17 ಸ್ಥಳಗಳಲ್ಲಿ ಈಗಾಗಲೇ ಶೋಧ ಕಾರ್ಯ ಪೂರ್ಣಗೊಂಡಿದೆ. ಇಲ್ಲಿ ಆರನೇ ಸ್ಥಳದಲ್ಲಿ ಹಾಗೂ ಬಂಗ್ಲೆಗುಡ್ಡೆ ಪರಿಸರದಲ್ಲಿ ಶೋಧ ಕಾರ್ಯಕ್ಕೆ ತೆರಳುವ ವೇಳೆ ಮಾನವ ದೇಹದ ಅವಶೇಷಗಳು ಸಿಕ್ಕಿದ್ದು ಹೊರತುಪಡಿಸಿದರೆ, ಇನ್ನುಳಿದ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಈ ಕಾರಣದಿಂದ ಈ 17 ಸ್ಥಳಗಳ ಕುರಿತು ಹಾಗೂ ಆ ಸ್ಥಳಗಳ ಪರಿಸರದ ಬಗ್ಗೆಯು ದೂರುದಾರನಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಯಿತು.
ತಾನು ಗುರುತಿಸಿರುವ ಸ್ಥಳಗಳಲ್ಲಿ ಶವಗಳನ್ನು ಹೂತ್ತಿರುವುದು ನಿಜ ಎಂದು ದೂರುದಾರ ಎಸ್ ಐಟಿ ಮುಂದೆ ಮತ್ತೆ ಹೇಳಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಮಾಡಿದಾಗ ವಾದವನ್ನು ನಡೆಸಿದ್ದಾನೆಂದು ಹೇಳಲಾಗುತ್ತಿದೆ.
ಈ ಸ್ಥಳಗಳಲ್ಲಿ ಮೂಳೆಗಳು ಕರಗಿರುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದ್ದು, ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಫಾರೆನ್ಸಿಕ್ ವೈದ್ಯರ ಜತೆಯೂ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.