ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂದೀಪ್ ರೆಡ್ಡಿ ವಂಗಾ ನಿರ್ದೇಶನ,ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದು, ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಹೊರಕ್ಕೆ ಬಂದಿದ್ದು ಸಂಚಲನ ಮೂಡಿಸಿದೆ. ಇದೇ ವೇಳೆ ಇದೀಗ ಪ್ರಕಾಶ್ ರಾಜ್ ಕೂಡ ಚಿತ್ರತಂಡದ ಜೊತೆ ಕಿರಿಕ್ ಮಾಡಿಕೊಂಡಿದ್ದು, ಅವರನ್ನು ತೆಗೆದುಹಾಕಲಾಗಿದೆ ಎನ್ನಲಾಗುತ್ತಿದೆ.
ಪ್ರಭಾಸ್ ಅಭಿನಯದ ಚಿತ್ರದಲ್ಲಿ ಪ್ರಕಾಶ್ ರಾಜ್ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಅವರ ಧ್ವನಿ ಚಿತ್ರದ ಬಿಡುಗಡೆ ವೀಡಿಯೊದಲ್ಲಿಯೂ ಕಾಣಿಸಿಕೊಂಡಿದೆ. ಆದಾಗ್ಯೂ, OTT Play ವರದಿಯ ಪ್ರಕಾರ, ನಟ ಇನ್ನು ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಇದಕ್ಕೆ ಕಾರಣ, ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಾಗುತ್ತಿರುವ ಸಮಯದಲ್ಲಿ ಸೆಟ್‌ಗಳಲ್ಲಿ ಸಮಸ್ಯೆಗಳು ಉದ್ಭವಿಸಿದ ನಂತರ ತೆಗೆದು ಹಾಕಲಾಗಿದೆ ಎಂಬ ಸುದ್ದಿ.
ಆದರೆ ಈ ಸುದ್ದಿಗೆ ಇದೀಗ ಖುದ್ದು ಪ್ರಕಾಶ್ ರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸುದ್ದಿಯು ಸುಳ್ಳು ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸ್ಪಿರಿಟ್ ಚಿತ್ರದ ಚಿತ್ರೀಕರಣವನ್ನು ಇನ್ನೂ ಪ್ರಾರಂಭಿಸಿಲ್ಲ. ಆದರೆ ಇದಾಗಲೇ ಇಂಥ ನಕಲಿ ಸುದ್ದಿ ಹರಡಿದೆ. ಸ್ವಲ್ಪ ಬೆಳೆಯಿರಿ, ಈ ರೀತಿ ನಕಲಿ ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಸ್ಪಿರಿಟ್ ಸಿನಿಮಾ ಘೋಷಣೆಯಾದಾಗಿನಿಂದ ಹೆಚ್ಚಿನ ಸದ್ದು ಮಾಡುತ್ತಿದೆ. ದೀಪಿಕಾ ಪಡುಕೋಣೆ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ. ಅವರು 8 ಗಂಟೆಗಳ ಶಿಫ್ಟ್ ಬೇಡಿಕೆಯಿಟ್ಟಿದ್ದರು. ಅದು ಸಾಧ್ಯವಾಗದ ಕಾರಣ ಅವರ ಬದಲಿಗೆ ಈಗ ಪ್ರಭಾಸ್ ಎದುರು ನಾಯಕಿಯಾಗಿರುವ ತೃಪ್ತಿ ಡಿಮ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ತೃಪ್ತಿ ಮತ್ತು ಸಂದೀಪ್ ಈ ಹಿಂದೆ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಪ್ರಕಾಶ್ ರಾಜ್ ಸುದ್ದಿ ಸದ್ದು ಮಾಡುತ್ತಿದೆ.
ಈ ವರ್ಷದ ಆರಂಭದಲ್ಲಿ ಟಿ-ಸೀರೀಸ್ ಎಂಬ ತಯಾರಕರು ಸ್ಪಿರಿಟ್ ಮಾರ್ಚ್ 5, 2027 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದರು. ಪ್ರಭಾಸ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ, ಚಿತ್ರದಲ್ಲಿ ವಿವೇಕ್ ಒಬೆರಾಯ್ ಮತ್ತು ಕಾಂಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.



