October 21, 2026
Wednesday, October 21, 2026
spot_img

ಬ್ಯಾಂಡೇಜ್‌ ಇಲ್ಲದೆ ಕ್ಯಾಮರಾ ಕಣ್ಣಿಗೆ ಸೆರೆ: ಟೈಗರ್ ಶ್ರಾಫ್ ಹೊಸ ಫೋಟೋಗಳು ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿ ಮುಂಬೈನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣವು ಇಡೀ ಚಲನಚಿತ್ರ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಂಬೈನ ಫುಟ್‌ಬಾಲ್ ಕ್ಲಬ್ ಒಂದರಿಂದ ಆಟ ಮುಗಿಸಿ ವಾಪಸ್ ಬರುವಾಗ ಅಕ್ಟೋಬರ್ 18 ರ ಭಾನುವಾರದಂದು ಈ ದುರ್ಘಟನೆ ನಡೆದಿತ್ತು. ನಟನ ಕಾರಿನ ಮೇಲೆ ದುಷ್ಕರ್ಮಿಗಳು ಅತಿ ಸಮೀಪದಿಂದ ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆತಂಕ ಮೂಡಿಸಿದ್ದವು.

ದಾಳಿಯ ಆರಂಭಿಕ ಫೋಟೋಗಳಲ್ಲಿ ಟೈಗರ್ ಶ್ರಾಫ್ ಮೈಮೇಲೆ ಬಟ್ಟೆಯಿಲ್ಲದೆ, ಎದೆ ಹಾಗೂ ಎಡಗೈಗೆ ಗಾಯದ ಬ್ಯಾಂಡೇಜ್‌ಗಳೊಂದಿಗೆ ಕಾಣಿಸಿಕೊಂಡಿದ್ದರು. ಸಣ್ಣಪುಟ್ಟ ಗಾಯದಿಂದ ಪಾರಾದ ಅವರನ್ನು ತಕ್ಷಣವೇ ತಪಾಸಣೆ ನಡೆಸಿ ಡಿಸ್ಚಾರ್ಜ್ ಮಾಡಲಾಗಿತ್ತು. ಘಟನೆಯ ಗಂಭೀರತೆ ಅರಿತು ಭಾನುವಾರವೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನಟನ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು.

ಮಂಗಳವಾರದಂದು ಮಹಾರಾಷ್ಟ್ರ ಸಚಿವ ಆಶಿಶ್ ಶೆಲಾರ್ ಅವರು ನಟ ಟೈಗರ್ ಶ್ರಾಫ್ ಅವರನ್ನು ನೇರವಾಗಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ತೆಗೆದ ಹೊಸ ಫೋಟೋಗಳಲ್ಲಿ ಟೈಗರ್ ಯಾವುದೇ ಬ್ಯಾಂಡೇಜ್‌ಗಳಿಲ್ಲದೆ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಿಗೆ ದೊಡ್ಡ ನಿರಾಳತೆಯನ್ನು ತಂದುಕೊಟ್ಟಿದೆ. “ಜುಹುವಿನಲ್ಲಿ ನಡೆದ ಈ ದುರದೃಷ್ಟಕರ ಗುಂಡಿನ ದಾಳಿಯ ಬಳಿಕ ಟೈಗರ್ ಶ್ರಾಫ್ ಅವರನ್ನು ಭೇಟಿಯಾಗಿ ಮಾತನಾಡಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ. ಅವರಿಗೆ ಧೈರ್ಯ ತುಂಬಿ, ಶೀಘ್ರ ಚೇತರಿಕೆಗೆ ಹಾರೈಸುತ್ತೇನೆ” ಎಂದು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮುಂಬೈ ಜನತೆಯ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯದ ಬೆಳವಣಿಗೆಗಳು ಚಿತ್ರರಂಗದಲ್ಲಿ ಭದ್ರತೆಯ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

Must Read