ಹೊಸ ದಿಗಂತ ವರದಿ,ಮಡಿಕೇರಿ:
ಕಳೆದ ಒಂದು ತಿಂಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೊಡಗು ಪೊಲೀಸರು ಜಿಲ್ಲೆಯ ವಿವಿಧೆಡೆಗಳಿಂದ ಕಳುವಾಗಿದ್ದ ಸುಮಾರು 11 ಲಕ್ಷ ರೂ.ಮೌಲ್ಯದ 104 ಮೊಬೈಲ್’ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ವಾರಸುದಾರರಿಗೆ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಮಂಗಳವಾರ ಈ ಮೊಬೈಲ್‌ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಎಸ್‌ಪಿ ಬಿಂದುಮಣಿ, ಮೊಬೈಲ್ ಫೋನ್‌ಗಳ ಪತ್ತೆಗೆ ಒಂದು ತಿಂಗಳ ಕಾರ್ಯಾಚರಣೆ ಆರಂಭಿಸಲಾಗಿತ್ತು. 2021-22 ರಲ್ಲಿ ಕೆಲವು ಮೊಬೈಲ್‌ಗಳು ಹಾಗೂ 2025ರಲ್ಲಿ ಅತೀ ಹೆಚ್ಚು ಮೊಬೈಲ್‌ಗಳು ಕಳುವಾಗಿದ್ದವು. ಸ್ಥಳೀಯರು ಸೇರಿದಂತೆ ಹೊರಗಿನಿಂದ ಬಂದಿದ್ದ ಹಲವರ ಮೊಬೈಲ್‌ಗಳು ಕಳ್ಳತನವಾಗಿತ್ತು.ಮೊಬೈಲ್ ಕಳೆದುಕೊಂಡಿದ್ದವರು ಸೆನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಸೈಬರ್ ಕ್ರೈಂ ಮತ್ತು ಇತರ ಉಪವಿಭಾಗದ ಪೊಲೋಸರು ಜಂಟಿ ಕಾರ್ಯಾಚರಣೆ ನಡೆಸಿ, ನಾಗರಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ, ಒಂದೇ ತಿಂಗಳಲ್ಲಿ ರೂ.11 ಲಕ್ಷ ಮೌಲ್ಯದ ಸುಮಾರು 104 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು, ಕೇರಳ ರಾಜ್ಯದಿಂದಲೂ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ತರಲಾಗಿದೆ ಎಂದು ವಿವರಿಸಿದರು.
ಸಾರ್ವಜನಿಕರ ಮೊಬೈಲ್ ಕಳುವಾದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು ಅಥವಾ ಸಿಇಐಆರ್ ಪೋರ್ಟಲ್‌ನಲ್ಲಿ ಮೊಬೈಲ್ ಫೋನಿನ ಮಾಹಿತಿ ನೀಡಿದಲ್ಲಿ ಪತ್ತೆ ಹಚ್ಚಬಹುದು ಎಂದು ಎಸ್‌ಪಿ ಮಾಹಿತಿ ನೀಡಿದರು.
ಈ ಸಂದರ್ಭ ಸೈಬರ್ ಕ್ರೈಂ ಡಿವೈಎಸ್‌ಪಿ ಲಕ್ಷ್ಮಿಕಾಂತ್ ತಳವಾರ, ಮಡಿಕೇರಿ ಡಿವೈಎಸ್‌ಪಿ ಸೂರಜ್, ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ಮೇದಪ್ಪ, ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.



