ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಬಹುಕಾಲದ ಗೆಳತಿ ಸಾನಿಯಾ ಚಂದೋಕ್ ಜೊತೆ ಮದುವೆಯಾಗುತ್ತಿದ್ದಾರೆ.
ಇದೀಗ ಸಚಿನ್ ತೆಂಡೂಲ್ಕರ್ ಕುಟುಂಬ ಮದುವೆಗೆ ಗಣ್ಯರನ್ನು ಆಹ್ವಾನಿಸಲು ಶುರು ಮಾಡಿದ್ದು , ಇಂದು ಪ್ರಧಾನಿ ಮೋದಿ ಅವರನ್ನು ಕೂಡ ಭೇಟಿಯಾಗಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಭೇಟಿಯಾದ ಸಚಿನ್ ತೆಂಡೂಲ್ಕರ್ ಕುಟುಂಬ ಸೋಶಿಯಲ್ ಮೀಡಿಯಾ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಆಹ್ವಾನ ನೀಡಾಲಾಯಿತು. ಯುವ ಜೋಡಿಗೆ ಸಲಹೆ ಹಾಗೂ ಮಾರ್ಗದರ್ಶನ ಜೊತೆಗೆ ಆಶೀರ್ವದಿಸಿದ ಪ್ರಧಾನಿಗೆ ಧನ್ಯವಾದ ಎಂದು ಹೇಳಿದ್ದಾರೆ.

ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೂಡ ಭೇಟಿಯಾದ ಸಚಿನ್ ಕುಟುಂಬ, ಮಗನ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅದೇ ರೀತಿ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮದುವೆಗೆ ಆಮಂತ್ರಣ ನೀಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆ ಮಾರ್ಚ್ 5, 2026ರಂದು ನಡೆಯಲಿದೆ. ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆಯಲಿದೆ. ಆಪ್ತರು, ಸಚಿನ್ ತೆಂಡೂಲ್ಕರ್ ಟೀಮ್ ಮೇಟ್ಸ್, ಕುಟುಂಬಸ್ಥರು, ಗಣ್ಯರಿಗೆ ಆಹ್ವಾನ ನೀಡಲಾಗಿದೆ.



