ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಮೊದಲ ಬಾರಿಗೆ ತಮ್ಮ ತಮ್ಮ ಆತ್ಮಚರಿತ್ರೆಯ ವಿವಾದದ ಕುರಿತು ಮೌನ ಮುರಿದಿದ್ದು, ತಮ್ಮ ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ(PRHI) ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ ಎಂಬ ನಿಲುವನ್ನು ಅನುಮೋದಿಸಿದ್ದಾರೆ.
ಪೆಂಗ್ವಿನ್ ಬಿಡುಗಡೆ ಮಾಡಿದ ಹೇಳಿಕೆಯನ್ನು ಹಂಚಿಕೊಂಡ ಜನರಲ್ ನರವಾಣೆ, “ಇದು ಪುಸ್ತಕದ ಸ್ಥಿತಿ” ಎಂದಷ್ಟೇ ಹೇಳಿದ್ದಾರೆ. ಈ ಮೂಲಕ ಆ ಪುಸ್ತಕ ಇನ್ನು ಪ್ರಕಟವಾಗಿಲ್ಲ . ಹೀಗಾಗಿ ಈ ಬಗ್ಗೆ ಸಂಸ್ಥೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಪೆಂಗ್ವಿನ್ ಪ್ರಕಾಶನವೂ ಸೋಶಿಯಲ್ ಮೀಡಿಯಾ ಎಕ್ಸ್ ಮೂಲಕ ಮಾಡಿದ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ, ಮಾಜಿ ಸೇನಾ ಮುಖ್ಯಸ್ಥರ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯ ಏಕೈಕ ಪ್ರಕಾಶನ ಹಕ್ಕುಗಳನ್ನು ಹೊಂದಿದೆ ಎಂದು ಪುನರುಚ್ಚರಿಸಿದೆ ಮತ್ತು ಪುಸ್ತಕವು ಇನ್ನೂ ಪ್ರಕಟವಾಗಿಲ್ಲ ಎಂದು ಪ್ರತಿಪಾದಿಸಿದೆ.
ಪೆಂಗ್ವಿನ್ ಪ್ರಕಾಶನದ ಸ್ಪಷ್ಟನೆ ಏನಿದೆ?
ಇತ್ತೀಚಿನ ಸಾರ್ವಜನಿಕ ಭಾಷಣ ಮತ್ತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆಯಾದ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಲು ಬಯಸುತ್ತದೆ. ಪುಸ್ತಕವು ಪ್ರಕಟಣೆಗೆ ಹೋಗಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಪುಸ್ತಕದ ಯಾವುದೇ ಪ್ರತಿಗಳನ್ನು ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ.
ಪ್ರಸ್ತುತ ಚಲಾವಣೆಯಲ್ಲಿರುವ ಪುಸ್ತಕದ ಯಾವುದೇ ಪ್ರತಿಗಳು, ಸಂಪೂರ್ಣ ಅಥವಾ ಭಾಗಶಃ, ಮುದ್ರಣ, ಡಿಜಿಟಲ್, ಪಿಡಿಎಫ್ ಅಥವಾ ಯಾವುದೇ ಇತರ ಸ್ವರೂಪದಲ್ಲಿ, ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ, ಯಾವುದೇ ವೇದಿಕೆಯಲ್ಲಿ ಇದ್ದರೆ ಅದು ಪೆಂಗ್ವಿನ್‌ನ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ ಮತ್ತು ಅದನ್ನು ತಕ್ಷಣವೇ ನಿಲ್ಲಿಸಬೇಕು.
ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪುಸ್ತಕದ ಕಾನೂನುಬಾಹಿರ ಮತ್ತು ಅನಧಿಕೃತ ಪ್ರಸರಣದ ವಿರುದ್ಧ ಕಾನೂನಿನಲ್ಲಿ ಲಭ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತದೆ. ಪ್ರಕಾಶಕರ ನಿಲುವನ್ನು ದಾಖಲೆಯಲ್ಲಿ ಇರಿಸಲು ಈ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಪೆಂಗ್ವಿನ್ ಸಂಸ್ಥೆ ಟ್ವಿಟ್ ಮೂಲಕ ಹೇಳಿದೆ.



