ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಕಸಿತ ಭಾರತದ ನಿರ್ಮಾಣಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಸುಧಾರಣೆ, ಆಧುನೀಕರಣ, ಚುರುಕಿನ ಕೃಷಿ ಯೋಜನೆ-ಪದ್ಧತಿ, ವಿಸ್ತೃತ ನೆಲೆಯಲ್ಲಿ ರೈತರ ಸಬಲೀಕರಣಕ್ಕೆ ಒತ್ತು ನೀಡಬೇಕಾದ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಒತ್ತಿ ಹೇಳಿದರು. ಅವರು ಹೊಸದಿಲ್ಲಿಯಲ್ಲಿ ನಡೆದ ಕಿಸಾನ್ ತಕ್ ಭಾರತ್ ಅಗ್ರಿಕಲ್ಚರ್ ಕಾನ್ಫರೆನ್ಸ್-2026ನ್ನು ಉದ್ದೇಶಿಸಿ ಮಾತನಾಡಿದರು.
ಇಂದು ಭಾರತದ ವಾರ್ಷಿಕ ಕೃಷಿ ರಫ್ತು 4 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಭಾರತವು ಹಾಲು, ದ್ವಿದಳ ಧಾನ್ಯಗಳು, ಸೆಣಬು, ಅಕ್ಕಿ ಮತ್ತು ರಾಗಿ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂ.1ಸ್ಥಾನದಲ್ಲಿದೆ. ಗೋದಿ, ಹತ್ತಿ, ಹಣ್ಣುಗಳು, ತರಕಾರಿಗಳು ಮತ್ತು ಮೀನು ಉತ್ಪಾದನೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ ಎಂಬುದನ್ನು ಎತ್ತಿತೋರಿದ ಪ್ರಧಾನಿಯವರು, ರೈತರು ಸಾಂಪ್ರದಾಯಿಕವಾದ ಗೋದಿ, ಅಕ್ಕಿ ಮತ್ತು ಕಬ್ಬಿನ ಮೇಲೆ ಮಾತ್ರವೇ ಅವಲಂಬಿಸದೆ ಅದರಾಚೆಗೆ ಇರುವ ಪರ್ಯಾಯ ಬೆಳೆಗಳು ಮತ್ತು ಸಂಬಂಧಿತ ಕೃಷಿ ಕ್ಷೇತ್ರಗಳ ಕಡೆಗೂ ಗಮನ ಹರಿಸಬೇಕೆಂದು ಆಗ್ರಹಿಸಿದರು. ವೈವಿಧ್ಯಮಯ ಕೃಷಿ-ಬೆಳೆ ನಮ್ಮನ್ನು ಬಲಗೊಳಿಸುತ್ತದೆ ಎಂದರು.
ಸಾಧನೆಗಳ ವಿಸ್ತಾರಕ್ಕೆ ಕರೆ
ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಯಂತಹ ಹಿಂದಿನ ಸಾಧನೆಗಳಂತೆಯೇ, ಇದೀಗ ನಾವು ಸೌರಶಕ್ತಿ ಕ್ರಾಂತಿಯಂತಹ ಆಧುನಿಕ ವಿಸ್ತರಣೆಗಳತ್ತ ಮುಖ ಮಾಡಬೇಕಾದ ಅಗತ್ಯದತ್ತ ಗಮನಸೆಳೆದರು. ಪಿಎಂ -ಕುಸುಮ್ ಯೋಜನೆಯ ಮೂಲಕ ದೇಶದಲ್ಲಿ ಸುಮಾರು 12 ಲಕ್ಷ ಸೌರ ಪಂಪ್ಗಳನ್ನು ಒದಗಿಸಲಾಗಿರುವುದನ್ನು ಮತ್ತು ಅನ್ನದಾತರನ್ನು ಶಕ್ತಿ ಪೂರೈಕೆದಾರರು ಅಥವಾ ಇಂಧನ ಪೂರೈಕೆದಾರರನ್ನಾಗಿ ಹೇಗೆ ಪರಿವರ್ತಿಸಿದೆ ಎಂಬುದರತ್ತಲೂ ಬೊಟ್ಟು ಮಾಡಿದರು.
ಸರ್ಕಾರದ ಮುಖ್ಯಸ್ಥರಾಗಿ ತಮ್ಮ 25 ವರ್ಷಗಳ ಅನುಭವವನ್ನು ಹಂಚಿಕೊಂಡ ಅವರು, ಗುಜರಾತ್ನಲ್ಲಿ “ಕಿಸಾನ್ ರಥಗಳು” ಮತ್ತು ಬೇಸಿಗೆ ಕೃಷಿ ಉತ್ಸವಗಳ ಮೂಲಕ ವೈಜ್ಞಾನಿಕ ಪ್ರಯೋಗಾಲಯಗಳು ಮತ್ತು ರೈತರ ಹೊಲಗಳ ನಡುವಿನ ಅಂತರವನ್ನು ಹೇಗೆ ಕಡಿಮೆ ಮಾಡಲಾಗಿತ್ತು ಎಂಬುದನ್ನು ವಿವರಿಸಿದರು.
ರಾಸಾಯನಿಕ ಮುಕ್ತ ಕೃಷಿಗೆ ಆಗ್ರಹ
ರೈತರು ಮತ್ತು ಪ್ರಗತಿಪರ ನಾಯಕರು ರಾಸಾಯನಿಕ ಮುಕ್ತ ಸಹಜ ಕೃಷಿಯನ್ನು ಅನುಸರಿಸುವ ಮೂಲಕ ಮುಂದಿನ ಪೀಳಿಗೆಗಳಿಗಾಗಿ ನಮ್ಮ ನೆಲದ ಮಣ್ಣನ್ನು ರಕ್ಷಿಸಬೇಕು, ಹಾಗೆಯೇ ಪರಿಸರವನ್ನೂ ಸಂರಕ್ಷಿಸಬೇಕೆಂಬುದು ತಮ್ಮ ಮನವಿ ಎಂದು ಆಗ್ರಹಪೂರ್ವಕವಾಗಿ ನುಡಿದರು.
ಪ್ರಜಾಪ್ರಭುತ್ವವನ್ನೂ ಜೇಬಲ್ಲಿಟ್ಟುಕೊಂಡ ವರ್ತನೆಗೆ ವಿಷಾದ
ಮುಂದುವರೆದು ಮಾತನಾಡಿದ ಪ್ರಧಾನಿ ಅವರು ವಿರೋಧ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು. ಇಂದು ಕೆಲವರು ಸಂವಿಧಾನ ಪುಸ್ತಕದ ಜೊತೆಗೆ ಭಾರತದ ಪ್ರಜಾಪ್ರಭುತ್ವವನ್ನು ಕೂಡ “ತಮ್ಮ ಜೇಬಿನಲ್ಲಿ” ಇಟ್ಟುಕೊಂಡಂತೆ ವರ್ತಿಸುತ್ತಿದ್ದಾರೆ. ಮಾತ್ರವಲ್ಲದೆ ಜನರಿಂದ ತಿರಸ್ಕರಿಸಲ್ಪಟ್ಟರೂ “ಅಧಿಕಾರದ ಅಮಲಿನಲ್ಲಿ” ತೇಲುತ್ತಿರುವುದು ವಿಪರ್ಯಾಸ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ. ಈ ಮೂಲಕ ಅವರು, ಸಂವಿಧಾನ ಪುಸ್ತಕವನ್ನು ಜೇಬಿನಲ್ಲಿಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ತರಾಟೆಗೆತ್ತಿಕೊಂಡಿದ್ದಾರೆ.
ಯಾವುದೇ ನಿರ್ದಿಷ್ಟ ನಾಯಕನ ಅಥವಾ ರಾಜಕೀಯ ಪಕ್ಷದ ಹೆಸರನ್ನು ಪ್ರಸ್ತಾಪಿಸದೆಯೇ, ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಅಧಿಕಾರದ ಹಪಾಹಪಿಯಿಂದ ದೇಶದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದನ್ನು ಪ್ರಸ್ತಾವಿಸಿದರು. ಕೆಲವರು ತಮ್ಮ ಜೇಬಿನಿಂದ ಸಂವಿಧಾನವನ್ನು ಹೊರತೆಗೆಯುತ್ತಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ತಮ್ಮ ಜೇಬಿನಲ್ಲಿಯೇ ಇವೆ ಎಂದೂ ಅವರು ಭಾವಿಸುತ್ತಾರೆ. ಅಧಿಕಾರದಲ್ಲಿ ಇಲ್ಲದಿದ್ದರೂ, ಅವರು ವಿಚಿತ್ರವಾದ ಅಧಿಕಾರದ ಅಮಲಿನಲ್ಲಿರುವಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಘಟನೆಯೊಂದನ್ನು ನೆನಪಿಸಿಕೊಂಡು, ಆರ್ಥಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಅಗ್ರಸ್ಥಾನ ಪಡೆದಾಗ, ಅದನ್ನು ಮಾಜಿ ಪ್ರಧಾನಿಯೊಬ್ಬರ ಹೆಸರಿನಲ್ಲಿರುವ ಸಂಸ್ಥೆಯೇ ಗುರುತಿಸಿದಾಗಲೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ರಾಜ್ಯದ ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು.
ಗುಜರಾತ್ಗೆ ಮೊದಲ ಸ್ಥಾನ ನೀಡಿದ ಸಂಸ್ಥೆಯು ಮಾಜಿ ಪ್ರಧಾನಿಯೊಬ್ಬರ ಹೆಸರನ್ನು ಹೊಂದಿತ್ತು. ಈ ಮೌಲ್ಯಮಾಪನವು ಪ್ರತಿಷ್ಠಿತ ಅರ್ಥಶಾಸ್ತ್ರಜ್ಞರ ಸಂಶೋಧನೆಯ ಆಧಾರದ ಮೇಲೆಯೇ ನಡೆದಿತ್ತು. ಆದರೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಸರ್ಕಾರಕ್ಕೆ ಗುಜರಾತ್ನ ಈ ಖ್ಯಾತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಹಾಗಾಗಿ ಅವರು ಸಂಶೋಧನೆ ನಡೆಸಿದವರನ್ನೇ ಗುರಿಯಾಗಿಸಿಕೊಂಡರು ಎಂದು ವಿಷಾದದಿಂದ ನೆನಪಿಸಿಕೊಂಡರು. ಇಂದು ಪ್ರಜಾಪ್ರಭುತ್ವ ಮತ್ತು ಹುತಾತ್ಮರ ಬಗ್ಗೆ ಮಾತನಾಡುವ ಇದೇ ವ್ಯಕ್ತಿಗಳು, ತಾವು ಅಧಿಕಾರದಲ್ಲಿದ್ದಾಗ ಇದಕ್ಕೆ ವಿಭಿನ್ನವಾಗಿ ವರ್ತಿಸಿದ್ದರು ಎಂದರು.



