February 11, 2026
Wednesday, February 11, 2026
spot_img

ಭಾರತೀಯ ರೈತರ ಆತಂಕಕ್ಕೆ ಅಮೆರಿಕ ಮದ್ದು? ವ್ಯಾಪಾರ ಒಪ್ಪಂದದ ಫ್ಯಾಕ್ಟ್ ಶೀಟ್‌ನಲ್ಲಿ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಕಳೆದ ಕೆಲವು ದಿನಗಳಿಂದ ಎದ್ದಿದ್ದ ಆತಂಕದ ಮೋಡಗಳು ಸ್ವಲ್ಪಮಟ್ಟಿಗೆ ತಿಳಿಯಾಗಿವೆ. ಭಾರತದ ಕೃಷಿ ಕ್ಷೇತ್ರವನ್ನು ಅಮೆರಿಕಕ್ಕೆ ಅಡವಿಡಲಾಗುತ್ತಿದೆ ಎಂಬ ರೈತ ಸಂಘಟನೆಗಳ ಗಂಭೀರ ಆರೋಪದ ಬೆನ್ನಲ್ಲೇ, ಅಮೆರಿಕ ಸರ್ಕಾರವು ತನ್ನ ಅಧಿಕೃತ ‘ಫ್ಯಾಕ್ಟ್ ಶೀಟ್’ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ.

ಭಾರತದ ಆಕ್ಷೇಪ ಮತ್ತು ರೈತರ ಪ್ರತಿಭಟನೆಯ ಬಿಸಿಯೋ ಎಂಬಂತೆ, ಅಮೆರಿಕವು ಈ ಹಿಂದೆ ಪ್ರಕಟಿಸಿದ್ದ ನಿಯಮಗಳಲ್ಲಿನ ಕೆಲವು ಗೊಂದಲಕಾರಿ ಪದಗಳನ್ನು ಸದ್ದಿಲ್ಲದೆ ತೆಗೆದುಹಾಕಿದೆ.

ಮೊದಲಿನ ವರದಿಯಲ್ಲಿ ಬಾದಾಮಿ, ಹಣ್ಣುಗಳ ಜೊತೆಗೆ ‘ಕೆಲವು ಕಾಳುಗಳ’ ಮೇಲಿನ ಆಮದು ಸುಂಕವನ್ನು ಭಾರತ ತೆಗೆದುಹಾಕಲಿದೆ ಎಂದು ಉಲ್ಲೇಖಿಸಲಾಗಿತ್ತು. ಇದು ಭಾರತೀಯ ಬೇಳೆಕಾಳು ಬೆಳೆಗಾರರ ನಿದ್ದೆಗೆಡಿಸಿತ್ತು. ಆದರೆ, ಈಗ ಅಪ್‌ಡೇಟ್ ಆಗಿರುವ ಫ್ಯಾಕ್ಟ್ ಶೀಟ್‌ನಲ್ಲಿ ‘ಕೆಲ ಕಾಳುಗಳು’ ಎಂಬ ಪದವನ್ನೇ ಅಮೆರಿಕ ಕೈಬಿಟ್ಟಿದೆ.

ಅಮೆರಿಕದಿಂದ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಕಲ್ಲಿದ್ದಲು, ಇಂಧನ ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಲು ಭಾರತ ‘ಬದ್ಧವಾಗಿದೆ’ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಈಗ ಅದನ್ನು ಬದಲಿಸಿ, ಅಷ್ಟು ಮೊತ್ತದ ಸರಕುಗಳನ್ನು ಖರೀದಿಸುವ ‘ಉದ್ದೇಶ ಹೊಂದಿದೆ’ ಎಂದು ತಿದ್ದುಪಡಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ಖರೀದಿ ಪಟ್ಟಿಯಿಂದ ‘ಕೃಷಿ’ ಎಂಬ ಪದವನ್ನೂ ತೆಗೆದುಹಾಕುವ ಮೂಲಕ ಭಾರತದ ಕೃಷಿ ಮಾರುಕಟ್ಟೆಗೆ ರಕ್ಷಣೆ ನೀಡಲಾಗಿದೆ.

ಭಾರತವು ತನ್ನ ಡಿಜಿಟಲ್ ಸೇವಾ ತೆರಿಗೆಯನ್ನು ರದ್ದುಗೊಳಿಸಲಿದೆ ಎಂದು ಅಮೆರಿಕ ಮೊದಲು ಹೇಳಿಕೊಂಡಿತ್ತು. ಇದು ಗೂಗಲ್, ಫೇಸ್‌ಬುಕ್‌ನಂತಹ ಕಂಪನಿಗಳಿಗೆ ವರದಾನವಾಗುತ್ತಿತ್ತು. ಆದರೆ, ಈಗಿನ ಪರಿಷ್ಕೃತ ವರದಿಯಲ್ಲಿ ಈ ಅಂಶವನ್ನೂ ತೆಗೆದುಹಾಕಲಾಗಿದ್ದು, ಭಾರತದ ಸಾರ್ವಭೌಮ ತೆರಿಗೆ ನೀತಿಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ:

ಅಮೆರಿಕದ ಈ ತಿದ್ದುಪಡಿಗಳು ಭಾರತ ಸರ್ಕಾರದ ರಾಜತಾಂತ್ರಿಕ ವಿಜಯ ಎಂದು ವಿಶ್ಲೇಷಿಸಲಾಗುತ್ತಿದೆ. ಕೃಷಿ ಮತ್ತು ಡೈರಿ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ವಿದೇಶಿ ಮಾರುಕಟ್ಟೆಗೆ ಮುಕ್ತಗೊಳಿಸುವುದಿಲ್ಲ ಎಂದು ಹೇಳುತ್ತಿದ್ದ ಸರ್ಕಾರದ ಮಾತಿಗೆ ಈಗ ಅಮೆರಿಕದ ಅಧಿಕೃತ ದಾಖಲೆಗಳೇ ಸಾಕ್ಷಿ ನುಡಿಯುತ್ತಿವೆ. ಇದರಿಂದ ರೈತ ಸಂಘಟನೆಗಳ ಆತಂಕ ಸ್ವಲ್ಪ ಮಟ್ಟಿಗೆ ದೂರಾಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !