ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ ‘ಕೆಮ್ಮಿದ’ ಎಂಬ ಸಣ್ಣ ವಿಷಯಕ್ಕೆ ಶುರುವಾದ ಜಗಳವೊಂದು ವಿಕೋಪಕ್ಕೆ ತಿರುಗಿ, ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ವಿನೋದ್ ಕುಮಾರ್ ಶೈನಿ (34) ಕಳೆದ 11 ವರ್ಷಗಳಿಂದ ಬಿಡದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮೂರು ದಿನಗಳ ಹಿಂದೆ ವಿನೋದ್ ಅವರು ಮನೆಯ ಮುಂದೆ ಕೆಮ್ಮಿದ ವಿಷಯಕ್ಕೆ ನೆರೆಹೊರೆಯವರಾದ ಸಂಜಯ್ ಎಂಬುವವರ ಜೊತೆ ಮಾತಿನ ಚಕಮಕಿ ನಡೆದಿದೆ. ಈ ಸಣ್ಣ ಜಗಳ ದೊಡ್ಡದಾಗಿ, ಸಂಜಯ್ ತನ್ನ ಸಹಚರರಾದ ಹೊಂಬಯ್ಯ ಮತ್ತು ವಿಜಯ್ ಅವರೊಂದಿಗೆ ಸೇರಿ ವಿನೋದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ:
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಿನೋದ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಸದ್ಯ ಬಿಡದಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



