February 12, 2026
Thursday, February 12, 2026
spot_img

ಬೀದಿಯಲ್ಲಿ ಗುಟ್ಟು ಬಿಡಲ್ಲ, ಬಂದ ಕೆಲಸ ಮುಗಿಯದೆ ಹೊರಡಲ್ಲ: ಡಿಕೆಶಿ ಖಡಕ್ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಕುರಿತು ಪರ-ವಿರೋಧದ ಚರ್ಚೆಗಳು ಕಾವು ಪಡೆದಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ರಹಸ್ಯ ಸಭೆ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್ ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ಉತ್ತರಿಸಿದರು. “ನಾನು ದೆಹಲಿಗೆ ಬಂದಿರುವುದೇ ರಾಜಕೀಯ ಮಾಡಲು. ಇಲ್ಲಿಗೆ ಬಂದ ಮೇಲೆ ಎಲ್ಲ ವಿಚಾರಗಳನ್ನು ಮಾತನಾಡದೆ ಸುಮ್ಮನೆ ವಾಪಸ್ ಹೋಗುತ್ತೇನಾ?” ಎಂದು ಪ್ರಶ್ನಿಸುವ ಮೂಲಕ, ತಾವು ಕೇವಲ ಔಪಚಾರಿಕ ಭೇಟಿಗಾಗಿ ಬಂದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದರು.

ಮೇಲ್ನೋಟಕ್ಕೆ ಅಸ್ಸಾಂ ಚುನಾವಣೆ ಮತ್ತು ಪಕ್ಷದ ಸಂಘಟನೆಯ ಕುರಿತು ಚರ್ಚಿಸಲು ಬಂದಿರುವುದಾಗಿ ಡಿಕೆಶಿ ತಿಳಿಸಿದ್ದಾರೆ. ಸಭೆಯ ವೇಳೆ ಅಸ್ಸಾಂನ ಕೆಲವು ಪ್ರಮುಖ ನಾಯಕರು ಅವರ ಜೊತೆಗಿದ್ದರು. “ಅಸ್ಸಾಂನಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಆ ಕುರಿತು ವರಿಷ್ಠರ ಜೊತೆ ಸಮಾಲೋಚನೆ ನಡೆಸಿದ್ದೇನೆ” ಎಂದು ಅವರು ಹೇಳಿದರು.

ಆದರೆ, ಕರ್ನಾಟಕದ ಅಧಿಕಾರ ಹಂಚಿಕೆ ಅಥವಾ ಮುಂದಿನ ರಾಜಕೀಯ ಬದಲಾವಣೆಗಳ ಬಗ್ಗೆ ಪ್ರಶ್ನಿಸಿದಾಗ, “ಸೋನಿಯಾ ಗಾಂಧಿ ಅವರ ನಿವಾಸದೊಳಗೆ ಯಾರ ಜೊತೆ ಏನು ಮಾತನಾಡಿದ್ದೇನೆ ಎಂಬುದನ್ನು ಬೀದಿಯಲ್ಲಿ ನಿಂತು ಹೇಳಲು ಸಾಧ್ಯವಿಲ್ಲ. ಏನೇನು ಚರ್ಚೆಯಾಗಬೇಕಿತ್ತೋ ಅದೆಲ್ಲವೂ ಸಮಾಲೋಚನೆಯಾಗಿದೆ” ಎಂದು ಮಾರ್ಮಿಕವಾಗಿ ಉತ್ತರಿಸಿ ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !