ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತಿ ವೇಗ ಮತ್ತು ಬೇಜವಾಬ್ದಾರಿತನದ ಚಾಲನೆಗೆ ಮತ್ತೊಂದು ದುಬಾರಿ ಕಾರು ಬಲಿಯಾಗಿದೆ. ಕಾನ್ಪುರದ ವಿಐಪಿ ರಸ್ತೆಯಲ್ಲಿ ತನ್ನ ಲ್ಯಾಂಬೋರ್ಗಿನಿ ರೆವೆಲ್ಟೊ ಕಾರಿನ ಮೂಲಕ ಸರಣಿ ಅಪಘಾತ ಎಸಗಿದ್ದ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಕುಡಿದ ಅಮಲಿನಲ್ಲಿದ್ದ ಶಿವಂ ಮಿಶ್ರಾ, ತನ್ನ ಸೂಪರ್ ಕಾರ್ ಅನ್ನು ನಿಯಂತ್ರಣವಿಲ್ಲದೆ ಚಲಾಯಿಸಿ ರಸ್ತೆ ಬದಿಯ ಪಾದಚಾರಿಗಳು, ಆಟೋ ರಿಕ್ಷಾ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದನು. ಈ ಭೀಕರ ಅಪಘಾತದಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ತೌಫಿಕ್ ಅಹ್ಮದ್ ಎಂಬುವವರ ಕಾಲು ಸಂಪೂರ್ಣ ಜಖಂಗೊಂಡಿದೆ. ಕಾರಿನ ವೇಗ ಎಷ್ಟಿತ್ತೆಂದರೆ, ಬೈಕ್ ಅನ್ನು ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರವೇ ಕಾರು ನಿಂತಿತ್ತು.
ಪ್ರಕರಣದ ಆರಂಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮಿಶ್ರಾ ಕುಟುಂಬ, ಅಪಘಾತದ ಸಮಯದಲ್ಲಿ ಕಾರನ್ನು ಶಿವಂ ಚಲಾಯಿಸುತ್ತಿರಲಿಲ್ಲ, ಬದಲಾಗಿ ಅವರ ಡ್ರೈವರ್ ಮೋಹನ್ ಚಲಾಯಿಸುತ್ತಿದ್ದ ಎಂದು ವಾದಿಸಿತ್ತು. ಆದರೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಚಾಲಕನ ಸೀಟಿನಲ್ಲಿ ಶಿವಂ ಮಿಶ್ರಾ ಇರುವುದು ಸ್ಪಷ್ಟವಾಗಿ ಕಂಡುಬಂದಿದೆ. ಅಲ್ಲದೆ, ಪ್ರತ್ಯಕ್ಷದರ್ಶಿಗಳು ಸಹ ಶಿವಂ ಅವರೇ ಕಾರು ಓಡಿಸುತ್ತಿದ್ದರು ಎಂದು ಸಾಕ್ಷಿ ನುಡಿದಿದ್ದಾರೆ.
ಇ-ರಿಕ್ಷಾ ಚಾಲಕ ಮೊಹಮ್ಮದ್ ತೌಫೀಕ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಶಿವಂ ಮಿಶ್ರಾ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



