ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನ 18ನೇ ಪಂದ್ಯದಲ್ಲಿ ಇಂದು ಆತಿಥೇಯ ಭಾರತ ತಂಡವು ನಮೀಬಿಯಾವನ್ನು ಎದುರಿಸಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಟೀಮ್ ಇಂಡಿಯಾ ಅಂತಿಮ ಸಿದ್ಧತೆ ಮಾಡಿಕೊಂಡಿದೆ. ಆದರೆ, ಅಭಿಮಾನಿಗಳಲ್ಲಿ ಕಾಡುತ್ತಿದ್ದ ಪ್ರಮುಖ ಪ್ರಶ್ನೆಯೆಂದರೆ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಆಡುತ್ತಾರಾ? ಎಂಬುದು.
ಕಳೆದ ಎರಡು ದಿನಗಳಿಂದ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಅಭಿಷೇಕ್ ಶರ್ಮಾ, ಈಗಷ್ಟೇ ಡಿಸ್ಚಾರ್ಜ್ ಆಗಿ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ, ಅವರು ಗುರುವಾರ ಯಾವುದೇ ಅಭ್ಯಾಸ ನಡೆಸಿಲ್ಲ. ಚೇತರಿಸಿಕೊಳ್ಳಲು ಅವರಿಗೆ ಇನ್ನೂ ಕಾಲಾವಕಾಶ ಬೇಕಿರುವುದರಿಂದ, ಇಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ. ಕನಿಷ್ಠ ಎರಡು ದಿನಗಳ ವಿಶ್ರಾಂತಿಯ ನಂತರವಷ್ಟೇ ಅವರು ಮೈದಾನಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.
ಅಭಿಷೇಕ್ ಶರ್ಮಾ ಅಲಭ್ಯತೆಯಿಂದಾಗಿ ಭಾರತದ ಆರಂಭಿಕ ಕ್ರಮಾಂಕದಲ್ಲಿ ಬದಲಾವಣೆ ನಿಶ್ಚಿತವಾಗಿದೆ. ಇಂದಿನ ಪಂದ್ಯದ ಹೈಲೈಟ್ಸ್ ಹೀಗಿರಬಹುದು:
ಅಭಿಷೇಕ್ ಬದಲಿಗೆ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗಕ್ಕೆ ಬಲ ತುಂಬಲು ವೇಗಿ ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ಮರಳಲಿದ್ದಾರೆ.
ಒಟ್ಟಾರೆಯಾಗಿ ತಂಡದ ಸಮತೋಲನ ಕಾಯ್ದುಕೊಳ್ಳಲು ಪ್ಲೇಯಿಂಗ್ ಇಲೆವೆನ್‌ನಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.



