September 25, 2026
Friday, September 25, 2026
spot_img

ಉಚಿತ ಶೂ ವಿತರಣೆಗೆ ಗುಣಮಟ್ಟದ ಕಂಟಕ: ಕಳಪೆ ಪಾದರಕ್ಷೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲಾ ಮಕ್ಕಳಿಗೆ ಉಚಿತವಾಗಿ ಪಾದರಕ್ಷೆ ಒದಗಿಸುವ ‘ಶೂ ಭಾಗ್ಯ’ ಯೋಜನೆ ಈ ಬಾರಿ ಗುಣಮಟ್ಟದ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದೆ.

ಶೈಕ್ಷಣಿಕ ವರ್ಷ ಆರಂಭವಾಗಿ ಹಲವು ತಿಂಗಳು ಕಳೆದ ಬಳಿಕ ವಿತರಿಸಲಾದ ಶೂಗಳು ಬಳಕೆಗೆ ಮುನ್ನವೇ ಹಾಳಾಗುತ್ತಿರುವುದು ಹಾಗೂ ಧರಿಸಿದ ಮಕ್ಕಳಿಗೆ ಕಾಲಿನಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ದೂರುಗಳು ವರದಿಯಾಗಿದ್ದು, ಶಿಕ್ಷಣ ಇಲಾಖೆ ಗುಣಮಟ್ಟ ಪರಿಶೀಲನೆಗೆ ಮುಂದಾಗಿದೆ.

ಕಲಬುರಗಿ ನಗರದ ತಾರಫೈಲ್ ಪ್ರದೇಶದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿತರಣೆಗೂ ಮುನ್ನವೇ ಕೆಲವು ಶೂಗಳು ಕಿತ್ತುಹೋಗಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಶೂ ಧರಿಸಿದಾಗ ಕಾಲಿಗೆ ನೋವು ಹಾಗೂ ಗುಳ್ಳೆಗಳು ಉಂಟಾಗುತ್ತಿವೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಲಿಗೆ ಬಿಚ್ಚಿಕೊಳ್ಳುತ್ತಿದೆ, ಗಾತ್ರ ಸರಿಯಾಗಿಲ್ಲ

ಈ ಬಾರಿ ವಿತರಣೆ ವ್ಯವಸ್ಥೆಯಲ್ಲೂ ಬದಲಾವಣೆಯಾಗಿದ್ದು, ರಾಜ್ಯಮಟ್ಟದಲ್ಲಿ ಟೆಂಡರ್ ಮೂಲಕ ಶೂಗಳ ಖರೀದಿ ನಡೆಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸಾಕ್ಸ್‌ಗಳ ಸಂಖ್ಯೆಯಲ್ಲಿಯೂ ವ್ಯತ್ಯಾಸವಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲು. ಇದೇ ವೇಳೆ, ರಾಜ್ಯದ ಹಲವು ಶಾಲೆಗಳಲ್ಲಿ ಶೂಗಳ ಅಡಿಭಾಗ ಕಳಚುವುದು, ಹೊಲಿಗೆ ಬಿಚ್ಚಿಕೊಳ್ಳುವುದು ಮತ್ತು ಗಾತ್ರ ಹೊಂದಿಕೆಯಾಗದಿರುವಂತಹ ದೂರುಗಳು ಕೇಳಿಬಂದಿವೆ.

ಇದನ್ನೂ ಓದಿ:

ಶಿಕ್ಷಣ ಸಚಿವರ ಪ್ರತಿಕ್ರಿಯೆ ಏನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶೂಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳಿಂದ ವರದಿ ಪಡೆದುಕೊಂಡಿದ್ದು, ಗಾತ್ರ ಸರಿಯಾಗದಿದ್ದರೆ ಮಕ್ಕಳಿಗೆ ಬದಲಿಯಾಗಿ ಶೂಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ನಡುವೆ, ರಾಜ್ಯ ಸರ್ಕಾರವೂ ಗುಣಮಟ್ಟದ ಕುರಿತು ಸ್ವತಂತ್ರ ಜಿಲ್ಲಾವಾರು ಪರಿಶೀಲನೆಗೆ ಆದೇಶಿಸಿದ್ದು, ಶೂಗಳ ಹೊಲಿಗೆ, ಅಡಿಭಾಗ, ಬಳಸಿರುವ ವಸ್ತು, ಗಾತ್ರ ಹಾಗೂ ಟೆಂಡರ್‌ನಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಮಕ್ಕಳ ಮೂಲಭೂತ ಅಗತ್ಯಕ್ಕೆಂದು ನೀಡುವ ಸೌಲಭ್ಯವೇ ಬಳಕೆಗೆ ಬಾರದಂತಾದರೆ ಯೋಜನೆಯ ಉದ್ದೇಶವೇ ಪ್ರಶ್ನೆಗೆ ಸಿಲುಕುತ್ತದೆ. ಹೀಗಾಗಿ ದೂರುಗಳ ನಿಖರ ಪರಿಶೀಲನೆ ನಡೆಸಿ, ಕಳಪೆ ಪೂರೈಕೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಾದರಕ್ಷೆ ತಲುಪಿಸುವುದು ಈಗ ಶಿಕ್ಷಣ ಇಲಾಖೆಯ ಮುಂದಿರುವ ಪ್ರಮುಖ ಜವಾಬ್ದಾರಿಯಾಗಿದೆ.

Must Read