April 23, 2026
Thursday, April 23, 2026
spot_img

ಲಕ್ಷಾಂತರ ಭಕ್ತರ ಜಯಘೋಷದ ಮಧ್ಯೆ ನಡೆಯಿತು ಕೊಟ್ಟೂರೇಶ್ವರ ಸ್ವಾಮಿಯ ಭವ್ಯ ರಥೋತ್ಸವ

ಹೊಸದಿಗಂತ ವರದಿ ಕೊಟ್ಟೂರು:

ನಾಡಿನ ಆರಾಧ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಭವ್ಯ ರಥೋತ್ಸವ ಗೋಧೂಳಿ ಸಮಯದ ಸಂಜೆಯ ಮೂಲಾ ನಕ್ಷತ್ರದ ಸಮಯದಲ್ಲಿ ಲಕ್ಷಾಂತರ ಭಕ್ತರ ಜಯಘೋಷದ ಮಧ್ಯೆ ನಡೆಯಿತು.

ಬೆಳಗ್ಗೆ ಬ್ರಾಹ್ಮೀ ಮಹೂರ್ತದ ಸಮಯದಲ್ಲಿ ಕ್ರಿಯಾ ಮೂರ್ತಿಗಳಾದ ಶಿವಪ್ರಕಾಶ್ ಕೊಟ್ಟೂರು ದೇವರ ನೇತೃತ್ವದಲ್ಲಿ ರುದ್ರಾಭಿಷೇಕದೊಂದಿಗೆ ಪೂಜಾ ಕಾರ್ಯಗಳು ಪ್ರಾರಂಭವಾದವು. ಭಕ್ತರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದರುಶನ ಪಡೆದರು. ಅನಂತರ ದಲಿತ ಕಾಲೋನಿಯವರು ಗಚ್ಚಿನಮಠದಲ್ಲಿರುವ ರಥಕ್ಕೆ ಹಾಕುವ ಏಣಿಯನ್ನು ಮೆರವಣಿಗೆಯ ಮೂಲಕ ರಥದ ಬಳಿಗೆ ತೆಗೆದುಕೊಂಡು ಬಂದರು.

ಸಂಜೆಯ ೩.೩೦ರ ಪೂಜೆಯ ನಂತರ ರಥಕ್ಕೆ ಬಲಿ ಅನ್ನವನ್ನು ತೆಗೆದುಕೊಂಡು ಹೋಗಲಾಯಿತು. ನಂತರ ಬೆಳ್ಳಿ ಪಲ್ಲಕ್ಕಿಯಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯ ಮೂಲಕ ಸಾಗಿ ಬಿಡಿಸಿಸಿ ಬ್ಯಾಂಕ್ ಬಳಿ ಬಂದಾಗ ದಲಿತ ಮಹಿಳೆಯರು ಸ್ವಾಮಿಗೆ ಕಳಸದ ಆರತಿಯನ್ನು ಬೆಳಗಿದರು.

ನಂತರ ಸ್ವಾಮಿಯು ರಥದ ಬಳಿ ಬಂದು ರಥಕ್ಕೆ ಮೂರು ಸುತ್ತು ಪ್ರದಕ್ಷಣೆ ಹಾಕಿ ರಥವನ್ನು ಏರುವ ಮೂಲಕ ಮೂಲಾ ನಕ್ಷತ್ರವು ಕೂಡುವ ಸಮಯಕ್ಕೆ ರಥವು ಮೂರು ಹೆಜ್ಜೆ ತನ್ನಿಂತಾನೆ ಚಲಿಸುತ್ತದೆ. ಅನಂತರ ಭಕ್ತರು ‘ಕೊಟ್ಟೂರೇಶ್ವರ ದೊರೆಯೇ ನಿನಗಾರು ಸರಿಯೇ ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್’ಎಂಬ ಜಯ ಘೋಷದ ಮದ್ಯೆ ರಥವನ್ನು ಎಳೆದರು.

ರಥೋತ್ಸವಕ್ಕೆ ಸುಮಾರು ಆರು ಲಕ್ಷಕ್ಕೂ ಅಧಿಕ ಭಕ್ತರು ರಥವನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಸುಮಾರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !