September 29, 2026
Tuesday, September 29, 2026
spot_img

ಬೆಂಗಳೂರು ಹೊರವಲಯದ ಅಭಿವೃದ್ಧಿಗೆ ಬಿಗ್ ಪ್ಲಾನ್; ಹೊಸ ರಸ್ತೆ, ಕುಡಿಯುವ ನೀರು-ಒಳಚರಂಡಿಗೆ ಆದ್ಯತೆ: ಕೃಷ್ಣ ಬೈರೇಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ವಿಸ್ತರಣೆ ಜಿಬಿಎ ಗಡಿ ದಾಟಿ ವೇಗ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಹೊರವಲಯದ ಪ್ರದೇಶಗಳು ಭವಿಷ್ಯದಲ್ಲಿ ಮೂಲಸೌಕರ್ಯ ಕೊರತೆಯಿಂದ ಬಳಲದಂತೆ ಸರ್ಕಾರ ಮುನ್ನೆಚ್ಚರಿಕೆಯ ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಜಿಬಿಎ ವ್ಯಾಪ್ತಿಯ ಹೊರಗಿನ ಪ್ರದೇಶಗಳಲ್ಲಿ ಹೊಸ ರಸ್ತೆ ಜಾಲ ರೂಪಿಸುವ ಜತೆಗೆ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಹಿಂದೆ ನಗರದ ವ್ಯಾಪ್ತಿಗೆ ಸೇರ್ಪಡೆಯಾದ ಹಲವು ಗ್ರಾಮಗಳು ಮತ್ತು ನಗರಸಭೆ ಪ್ರದೇಶಗಳಲ್ಲಿ ಅಗತ್ಯ ಸೌಲಭ್ಯಗಳು ಮೊದಲೇ ಕಲ್ಪಿಸದಿರುವುದು ಇಂದಿನ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಹಿಂದಿನ ಯೋಜನಾ ಲೋಪಗಳಿಂದ ಪಾಠ ಕಲಿತು, ಮುಂದಿನ ನಗರ ವಿಸ್ತರಣೆಯನ್ನು ಯೋಜಿತವಾಗಿ ನಿರ್ವಹಿಸುವ ಅಗತ್ಯವಿದೆ ಎಂದರು.

ಈಗಾಗಲೇ ಕೆಲಸ ಆರಂಭವಾಗಿದೆ

ಜಿಬಿಎ ಹೊರಗಿನ ಪ್ರದೇಶಗಳು ವೇಗವಾಗಿ ನಗರೀಕರಣಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಈಗಲೇ ರಸ್ತೆ ಜಾಲವನ್ನು ಗುರುತಿಸಿ ಸಂರಕ್ಷಿಸುವ ಕೆಲಸ ಆರಂಭಿಸಲಾಗಿದೆ. ತಾಲೂಕು ಹಾಗೂ ಹೋಬಳಿ ಕೇಂದ್ರಗಳು, ಪ್ರಮುಖ ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು, ಪೆರಿಫೆರಲ್ ರಿಂಗ್ ರೋಡ್ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೊಳಗೊಂಡ ಹೊಸ ಗ್ರಿಡ್ ರೂಪಿಸಲಾಗುತ್ತಿದೆ. ಈಗಿರುವ ಕಿರಿದಾದ ರಸ್ತೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ವಿಸ್ತರಿಸುವ ಮೂಲಕ ಭವಿಷ್ಯದ ಸಂಚಾರ ಒತ್ತಡವನ್ನು ಎದುರಿಸಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ:

BWSSB ವ್ಯಾಪ್ತಿಗೆ ಇಡೀ ಬೆಂಗಳೂರು

ರಸ್ತೆ ಅಭಿವೃದ್ಧಿಯ ಜತೆಗೆ ಇಡೀ ಬೆಂಗಳೂರು ನಗರ ಜಿಲ್ಲೆಯನ್ನು BWSSB ವ್ಯಾಪ್ತಿಗೆ ತರಲಾಗಿದ್ದು, ಜಿಬಿಎ ಹೊರಗಿನ ಪ್ರದೇಶಗಳ ಕುಡಿಯುವ ನೀರು ಮತ್ತು ಒಳಚರಂಡಿ ಅಗತ್ಯಗಳಿಗಾಗಿ ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ. ಮುಂದಿನ ವರ್ಷಗಳ ನೀರಿನ ಬೇಡಿಕೆ, ಸಂಗ್ರಹಣೆ, ಶುದ್ಧೀಕರಣ ಮತ್ತು ವಿತರಣಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ. ಒಳಚರಂಡಿ ಜಾಲ ಹಾಗೂ ಸಂಸ್ಕರಣಾ ಘಟಕಗಳ ಸ್ಥಾಪನೆಗೂ ಹಂತವಾರು ಕಾರ್ಯಯೋಜನೆ ಸಿದ್ಧವಾಗಲಿದೆ.

ಬೆಂಗಳೂರಿನ ವಿಸ್ತರಣೆ ಅನಿವಾರ್ಯವಾಗಿರುವ ಸಂದರ್ಭದಲ್ಲಿ, ನಗರ ಬೆಳೆದ ಬಳಿಕ ಮೂಲಸೌಕರ್ಯ ಕಲ್ಪಿಸುವ ಬದಲು ಬೆಳವಣಿಗೆಗೂ ಮುನ್ನವೇ ರಸ್ತೆ, ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಜಾಗ ಹಾಗೂ ಯೋಜನೆ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಕ್ರಮ ಪರಿಣಾಮಕಾರಿಯಾಗಿ ಜಾರಿಯಾದರೆ ಜಿಬಿಎ ಹೊರವಲಯದ ಭವಿಷ್ಯದ ನಗರೀಕರಣವನ್ನು ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸಲು ನೆರವಾಗಬಹುದು.

Must Read