February 13, 2026
Friday, February 13, 2026
spot_img

ಅಡಿಯಾಲ ಜೈಲಿನಲ್ಲಿ ಮಾಜಿ ಪ್ರಧಾನಿಗೆ ನರಕಯಾತನೆ? ಸುಪ್ರೀಂ ಕೋರ್ಟ್ ಮಧ್ಯಪ್ರವೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಸಂಗತಿಯೊಂದು ಬಯಲಾಗಿದೆ. ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿರುವ ಇಮ್ರಾನ್ ಖಾನ್ ತಮ್ಮ ಬಲಗಣ್ಣಿನ ಶೇ. 85 ರಷ್ಟು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.

ಈ ಪ್ರಕರಣದ ವಿಚಾರಣೆ ವೇಳೆ ಇಮ್ರಾನ್ ಖಾನ್ ಸಹೋದರಿ ಅಲೀಮಾ ಖಾನ್ ಸುಪ್ರೀಂ ಕೋರ್ಟ್ ಆವರಣದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಜೈಲಿನಲ್ಲಿ ತಮ್ಮ ಸಹೋದರನನ್ನು ಅತಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಯಾಹ್ಯಾ ಅಫ್ರಿದಿ ನೇತೃತ್ವದ ಪೀಠವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಫೆಬ್ರವರಿ 16ರ ಒಳಗಾಗಿ ಇಮ್ರಾನ್ ಖಾನ್ ಅವರಿಗೆ ನುರಿತ ನೇತ್ರ ತಜ್ಞರಿಂದ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿದೆ. “ಯಾವುದೇ ಕೈದಿಯ ಸುರಕ್ಷತೆ ಮತ್ತು ಆರೋಗ್ಯದ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ” ಎಂದು ನ್ಯಾಯಾಲಯ ಎಚ್ಚರಿಸಿದೆ.

ನ್ಯಾಯಾಲಯದ ಅಮಿಕಸ್ ಕ್ಯೂರಿ ಬ್ಯಾರಿಸ್ಟರ್ ಸಲ್ಮಾನ್ ಸಫ್ದಾರ್ ಸಲ್ಲಿಸಿದ ವರದಿಯ ಪ್ರಕಾರ. ಅಕ್ಟೋಬರ್ 2025ರವರೆಗೆ ಇಮ್ರಾನ್ ಖಾನ್ ಅವರ ದೃಷ್ಟಿ ಸಹಜವಾಗಿತ್ತು. ಜೈಲು ಆಡಳಿತಕ್ಕೆ ದೂರು ನೀಡಿದರೂ ಸ್ಪಂದಿಸದ ಕಾರಣ ಸಮಸ್ಯೆ ಉಲ್ಬಣಿಸಿದೆ. ಬಲಗಣ್ಣಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿದ್ದು, ಈಗ ಕೇವಲ ಶೇ. 15ರಷ್ಟು ಮಾತ್ರ ದೃಷ್ಟಿ ಉಳಿದಿದೆ.

ಇದೇ ವೇಳೆ, ಇಮ್ರಾನ್ ಖಾನ್ ಅವರಿಗೆ ಲಂಡನ್‌ನಲ್ಲಿರುವ ಅವರ ಪುತ್ರರಾದ ಖಾಸಿಮ್ ಮತ್ತು ಸುಲೇಮಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ನೀಡುವಂತೆಯೂ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !