February 13, 2026
Friday, February 13, 2026
spot_img

ಲಕ್ನೋದಲ್ಲಿ ಭೀಕರ ಅಪಘಾತ: ಟೈರ್ ಸ್ಫೋಟಗೊಂಡು ಐವರ ಮೇಲೆ ಹರಿದ ಕಾರು, ಓರ್ವ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲೇಜಿನ ಫೇರ್‌ವೆಲ್‌ ಪಾರ್ಟಿ ಮುಗಿಸಿ ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಯೊಬ್ಬನ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಎರಡನೇ ತರಗತಿಯ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

21 ವರ್ಷದ ವಿದ್ಯಾರ್ಥಿ ಗೌರವ್ ಸಿಂಗ್ ಎಂಬಾತ ತನ್ನ ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಹಠಾತ್ತಾಗಿ ಟೈರ್ ಸ್ಫೋಟಗೊಂಡಿದೆ. ಇದರಿಂದಾಗಿ ಕಾರಿನ ನಿಯಂತ್ರಣ ತಪ್ಪಿ, ಮೊದಲು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಪಥ ಬದಲಿಸಿ ರಸ್ತೆ ಬದಿಯಲ್ಲಿದ್ದ ಜನರ ಮೇಲೆ ನುಗ್ಗಿದೆ.

ಈ ದುರ್ಘಟನೆಯಲ್ಲಿ ಅರ್ಮಾನ್, ಸಾಧನಾ ಪಟೇಲ್, ಮೀನಾ ದೇವಿ ಹಾಗೂ 6 ವರ್ಷದ ಬಾಲಕ ದೀಕ್ಷಾಂತ್ ಮೇಲೆ ಕಾರು ಹರಿದಿದೆ. ಅಷ್ಟಕ್ಕೇ ನಿಲ್ಲದ ವಾಹನವು ಮುಂದಿದ್ದ ಇ-ರಿಕ್ಷಾ ಮತ್ತು ಆಟೋಗೂ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇ-ರಿಕ್ಷಾ ಚಾಲಕ ಅವಧ್ ಬಿಹಾರಿ ಸೇರಿದಂತೆ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 2ನೇ ತರಗತಿಯ ವಿದ್ಯಾರ್ಥಿ ದೀಕ್ಷಾಂತ್‌ನನ್ನು ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಚಾಲಕ ಗೌರವ್ ಸಿಂಗ್ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !