May 30, 2026
Saturday, May 30, 2026
spot_img

ಲಂಚಬಾಕ ಪಿಡಿಓಗೆ ‘ಜೈಲು’ ಭಾಗ್ಯ: ಸುಳ್ಳು ಸಾಕ್ಷಿ ಹೇಳಿದ ದೂರುದಾರನಿಗೂ ಸಂಕಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಚದ ಆಸೆಗೆ ಬಿದ್ದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಈಗ ಜೈಲೇ ಗತಿಯಾಗಿದೆ. ರೈತನಿಂದ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಲಿಂಗಸುಗೂರು ತಾಲೂಕಿನ ಗೋರೆಬಾಳ ಗ್ರಾಮ ಪಂಚಾಯತಿ ಪಿಡಿಓ ಮಹ್ಮದ ಖಾಜಾಗೆ ರಾಯಚೂರು ಜಿಲ್ಲಾ ನ್ಯಾಯಾಲಯವು 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

2017ರಲ್ಲಿ ಗೊರೇಬಾಳ ತಾಂಡಾದ ಚೇತನ್ ಎಂಬ ರೈತರು ತಮ್ಮ ಜಮೀನಿನಲ್ಲಿ ಶೇಡ್‌ ನಿರ್ಮಾಣ ಮಾಡಲು ಸರ್ಕಾರದಿಂದ ಬರಬೇಕಿದ್ದ ಸಹಾಯಧನ ಬಿಡುಗಡೆಗಾಗಿ ಪಿಡಿಓ ಅವರನ್ನು ಸಂಪರ್ಕಿಸಿದ್ದರು. ಈ ಕೆಲಸಕ್ಕಾಗಿ ಪಿಡಿಓ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ರೈತ ನೀಡಿದ ದೂರಿನ ಮೇರೆಗೆ ಎಸಿಬಿ ಪೊಲೀಸರು ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ಪಿಡಿಓರನ್ನು ರೆಡ್‌ ಹ್ಯಾಂಡ್ ಆಗಿ ಹಿಡಿದಿದ್ದರು.

ಈ ಪ್ರಕರಣದ ವಿಚಾರಣೆ ವೇಳೆ ದೂರುದಾರ ಚೇತನ್ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದರು. ತಾನು ನೀಡಿದ ದೂರಿಗೆ ವಿರುದ್ಧವಾಗಿ ಸಾಕ್ಷಿ ನುಡಿದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರಿ ಅಭಿಯೋಜಕರು, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ದೂರುದಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು, ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸಿದ ಚೇತನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶಿರಸ್ತೇದಾರರಿಗೆ ಆದೇಶಿಸಿದ್ದಾರೆ.

ಒಟ್ಟಿನಲ್ಲಿ ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆಯ ಜೊತೆಗೆ, ಕಾನೂನಿನ ಮುಂದೆ ಸುಳ್ಳು ಹೇಳುವವರಿಗೂ ಈ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !