February 13, 2026
Friday, February 13, 2026
spot_img

ಕೇಂದ್ರದ ಅನುದಾನ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಆರ್‌. ಅಶೋಕ್‌ ಆಗ್ರಹ

ಹೊಸದಿಗಂತ ವರದಿ ಚಿತ್ರದುರ್ಗ:

ಮನಮೋಹನ್‌ಸಿಂಗ್ ಸರ್ಕಾರಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದಾದರೆ ನಾನು ಬಹಿರಂಗ ಕ್ಷಮೆಯಾಚಿಸುತ್ತೇನೆ. ತಪ್ಪಿದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸವಾಲು ಹಾಕಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಸರ್ಕಾರದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಆಡಳಿತಾವದಿಯಲ್ಲಿ ಜಿಎಸ್‌ಟಿ ಸಹಿತ ತೆರಿಗೆ, ಸಾರಿಗೆ, ರೈಲ್ವೆ ಮತ್ತಿತರ ಇಲಾಖೆಗಳಿಂದ ರಾಜ್ಯಕ್ಕೆ ಸಿಕ್ಕಿರುವ ಅನುದಾನ, ತೆರಿಗೆ ಕುರಿತು ರಾಜ್ಯ ಸರ್ಕಾರ ಶ್ವೇತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.

ಜಿಎಸ್‌ಟಿ, ನೀತಿ ಆಯೋಗ ಹಾಗೂ ಪ್ರಧಾನಿ ಕರೆಯುವ ಸಭೆಗಳಿಗೆ ಹಾಜರಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಮಾತನಾಡುವುದರಿಂದ ಯಾವುದೇ ಪ್ರಯೋಜನವಾಗದು. ರಾಜ್ಯದಲ್ಲಿ ಸಾವಿರ ದಿನ ಏನು ಸಾಧಿಸಿದ್ದೀರಿ ಎಂದು ಸಾಧನೆಗಳ ಸಮಾವೇಶ ಮಾಡಲು ಹೊರಟಿದ್ದೀರಿ. ಈ ಅವಧಿಯಲ್ಲಿ ಸಾವಿರಾರು ಹಗರಣಗಳನ್ನು ನಡೆಸಿರುವುದೇ ರಾಜ್ಯ ಕಾಂಗ್ರೇಸ್ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.

ಸುದೀರ್ಘಾವಧಿ ಆಡಳಿತದ ನಡೆಸಿದ, ೧೭ನೇ ಬಜೆಟ್ ಮಂಡಿಸಲು ಮುಂದಾಗಿರುವ ಸಿದ್ದರಾಮಯ್ಯ ನಿಜಕ್ಕೂ ಗ್ರೇಟ್ ಎಂದು ವ್ಯಂಗವಾಡಿದ ಅಶೋಕ್, ಸ್ವಾತಂತ್ರ್ಯ ನಂತರದ ಎಲ್ಲ ಸಿಎಂಗಳಿಗಿಂತ ಸಿದ್ದರಾಮಯ್ಯ ಅತಿ ಹೆಚ್ಚು ಸಾಲ(೩ ಲಕ್ಷ ಕೋಟಿ ರೂ.)ಮಾಡಿದ್ದಾರೆ.ನಿ ಜಕ್ಕೂ ಇವರ ಆಡಳಿತ ಉತ್ತಮವಾಗಿ ಇದ್ದಿದ್ದರೆ ವಿಜಯನಗರ ಸಾಮ್ರಾಜ್ಯದಂತೆ ರಾಜ್ಯ ಸಮೃದ್ಧವಾಗಿರ ಬೇಕಿತ್ತು. ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಸಮಿತಿ ವರದಿ ರಾಜ್ಯ ಕಾಂಗ್ರೇಸ್ ಸರ್ಕಾರದ ಅಸಮರ್ಥ ಆಡಳಿತಕ್ಕೆ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿ ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದರು.


Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !