ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿಯ ಅರಮನೆ ಆವರಣದಲ್ಲಿರುವ ಪುರಾತನ ಶ್ರೀ ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ವಿಶೇಷ ದಿನದ ಪ್ರಮುಖ ಆಕರ್ಷಣೆಯಾದ 11 ಕೆಜಿ ತೂಕದ ಚಿನ್ನದ ಮುಖವಾಡವನ್ನು (ಕೊಳಗ) ಜಿಲ್ಲಾ ಸರ್ಕಾರಿ ಖಜಾನೆಯಿಂದ ಪೊಲೀಸ್ ಭದ್ರತೆಯಲ್ಲಿ ಹೊರತೆಗೆಯಲಾಗಿದೆ.
ಈ ಭವ್ಯ ಚಿನ್ನದ ಮುಖವಾಡಕ್ಕೆ ದಶಕಗಳ ಇತಿಹಾಸವಿದೆ. 1953ರಲ್ಲಿ ಯದುವಂಶದ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು, ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನನದ ಸವಿನೆನಪಿಗಾಗಿ ಈ ಅಮೂಲ್ಯ ಕಾಣಿಕೆಯನ್ನು ದೇವರಿಗೆ ಸಮರ್ಪಿಸಿದ್ದರು.
ವರ್ಷವಿಡೀ ಸರ್ಕಾರಿ ಖಜಾನೆಯಲ್ಲಿ ಭದ್ರವಾಗಿರುವ ಈ ಚಿನ್ನದ ಕೊಳಗವನ್ನು ಕೇವಲ ಶಿವರಾತ್ರಿಯಂದು ಮಾತ್ರ ದೇವರಿಗೆ ಧಾರಣೆ ಮಾಡಲಾಗುತ್ತದೆ. ಶಿವರಾತ್ರಿಯ ದಿನದಂದು ಮುಂಜಾನೆಯಿಂದ ಮಧ್ಯರಾತ್ರಿಯವರೆಗೆ ಭಕ್ತರಿಗೆ ಈ ವಿಶೇಷ ಅಲಂಕಾರದ ದರ್ಶನ ಪಡೆಯಲು ಅವಕಾಶವಿರುತ್ತದೆ. ಹಬ್ಬ ಮುಗಿದ ನಂತರ ಇದನ್ನು ಮರಳಿ ಖಜಾನೆಗೆ ರವಾನಿಸಲಾಗುತ್ತದೆ. ಸದ್ಯ ಅರಮನೆ ನಗರಿಯ ಜನತೆ ಈ ಅಪರೂಪದ ವೈಭವವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.



