February 14, 2026
Saturday, February 14, 2026
spot_img

ಮೂರೂವರೆ ಗಂಟೆಗಳ ಕಾರ್ಯಾಚರಣೆ ಯಶಸ್ವಿ: ತೋಟದ ಬಾವಿಯಲ್ಲಿದ್ದ ಚಿರತೆ ರಕ್ಷಣೆ!

ಹೊಸದಿಗಂತ ತುಮಕೂರು:

ತಿಪಟೂರು ನಗರದ ಗಾಂಧಿನಗರದ ಸಮೀಪವಿರುವ ಮಾರನಗೆರೆಯ ಬೆಂಗಳೂರು ತೋಟದ ಮನೆಯಲ್ಲಿ ಇಂದು ಬೆಳಗ್ಗೆ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿತ್ತು.

ಕೃಷ್ಣಮೂರ್ತಿ ಎಂಬುವವರಿಗೆ ಸೇರಿದ ತೋಟದ ಬಾವಿಯಲ್ಲಿ ಅಂದಾಜು ಮೂರು ವರ್ಷದ ಚಿರತೆಯೊಂದು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಆದರೆ, ಮಾಹಿತಿ ನೀಡಿದರೂ ಮಧ್ಯಾಹ್ನದವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಇಲಾಖೆಯ ವಿಳಂಬ ಧೋರಣೆಯನ್ನು ಖಂಡಿಸಿದ ಜನರು ಸ್ಥಳದಲ್ಲೇ ಆಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಗ್ರಾಮಸ್ಥರ ಪೂರ್ಣ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿದರು. ಬಾವಿಗೆ ಬಲೆಯನ್ನು ಇಳಿಸಿ ಚಾಣಾಕ್ಷತನದಿಂದ ಚಿರತೆಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.

“ರಕ್ಷಿಸಲಾದ ಚಿರತೆಗೆ ಸದ್ಯ ಮೂರು ವರ್ಷ ಪ್ರಾಯವಿದ್ದು, ಅದನ್ನು ಪಶುವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಗ್ಯ ವರದಿ ಬಂದ ನಂತರ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು,” ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !