ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಲಿವುಡ್‌ನಲ್ಲಿ ಈಗಾಗಲೇ ಪ್ರಸಿದ್ಧ ಸ್ಟುಡಿಯೋ ಹೊಂದಿರುವ ಕನ್ನಡಿಗ ನಮಿತ್ ಮಲ್ಹೋತ್ರಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದ ಹಿಂದೆ ಒಂದು ದೊಡ್ಡ ಉದ್ದೇಶವಿದೆ ಎನ್ನುವುದನ್ನು ಅವರು ಬಹಿರಂಗಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಮಿತ್, ಹಾಲಿವುಡ್ ಸಿನಿಮಾ ಮಾರುಕಟ್ಟೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ವೈದ್ಯಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಜಗತ್ತನ್ನೇ ಆಳುತ್ತಿದ್ದೇವೆ. ಆದರೆ ಹಾಲಿವುಡ್ ಇಂದಿಗೂ ಭಾರತೀಯರನ್ನು ಕೇವಲ ಬಡವರನ್ನಾಗಿ ಅಥವಾ ಸಂತ್ರಸ್ತರನ್ನಾಗಿ ತೋರಿಸುತ್ತಿದೆ. ‘ಸ್ಲಂಡಾಗ್ ಮಿಲಿಯನೇರ್’ ಅಂತಹ ಚಿತ್ರಗಳೇ ಇದಕ್ಕೆ ಸಾಕ್ಷಿ. ನಮ್ಮ ಶ್ರೀಮಂತ ಪರಂಪರೆಯನ್ನು ವಿಶ್ವಕ್ಕೆ ಹೆಮ್ಮೆಯಿಂದ ತೋರಿಸಬೇಕು ಎಂಬ ಹಠದಿಂದ ನಾನು ಈ ಚಿತ್ರಕ್ಕೆ ಕೈ ಹಾಕಿದ್ದೇನೆ” ಎಂದು ಅವರು ಗುಡುಗಿದ್ದಾರೆ.
ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಈ ಎರಡೂ ಭಾಗಗಳಿಗೆ ಸೇರಿ ಸುಮಾರು 4,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ವಿಶೇಷವೆಂದರೆ, ಯಾವುದೇ ದೊಡ್ಡ ಸಂಸ್ಥೆಗಳ ಸಹಭಾಗಿತ್ವವಿಲ್ಲದೆ ಕೇವಲ ಒಂದು ಸ್ಟುಡಿಯೋದಿಂದಲೇ ಇಷ್ಟೊಂದು ದೊಡ್ಡ ಮೊತ್ತದ ಹಣ ಹೂಡಿಕೆಯಾಗುತ್ತಿರುವುದರಿಂದ, ಇದು ವಿಶ್ವದ ಅತಿದೊಡ್ಡ ‘ಸ್ವತಂತ್ರ ಹಣಕಾಸು ಚಿತ್ರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಿನಿಮಾದ ಮೊದಲ ಭಾಗವು 2026ರ ದೀಪಾವಳಿ ಹಬ್ಬದಂದು ಅದ್ಧೂರಿಯಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನು ಎರಡನೇ ಭಾಗವು 2027ರ ದೀಪಾವಳಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಭಾರತದ ಇತಿಹಾಸವನ್ನು ಹಾಲಿವುಡ್ ಶೈಲಿಯ ತಾಂತ್ರಿಕತೆಯಲ್ಲಿ ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.



