April 24, 2026
Friday, April 24, 2026
spot_img

ಮಾದಪ್ಪನ ಸನ್ನಿಧಿಯಲ್ಲಿ ಡಿಕೆಶಿ ಪತ್ನಿ: ರಾಜಕೀಯ ಸಂಚಲನದ ನಡುವೆ ‘ಮಲೆಮಹದೇಶ್ವರ’ನ ದರುಶನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಮಹಾಪೂರವೇ ಹರಿದುಬಂದಿದೆ. ಈ ವಿಶೇಷ ದಿನದಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಅವರು ಮಲೆ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬೆಟ್ಟಕ್ಕೆ ಭೇಟಿ ನೀಡಿದ ಉಷಾ ಶಿವಕುಮಾರ್ ಅವರು ಪ್ರಸಿದ್ಧ ಸಾಲೂರು ಮಠಕ್ಕೂ ಭೇಟಿ ನೀಡಿದರು. ಅಲ್ಲಿನ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಲೂರು ಶ್ರೀಗಳ ಆಶೀರ್ವಾದ ಪಡೆದರು. ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಡಿಕೆಶಿ ಕುಟುಂಬ ಹಾಗೂ ಕನಕಪುರ ಭಾಗದ ಮುಖಂಡರು ಮಾದಪ್ಪನ ಸನ್ನಿಧಿಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

ಮಹಾಶಿವರಾತ್ರಿ ಹಿನ್ನೆಲೆ ಕಳೆದ ಮೂರ್ನಾಲ್ಕು ದಿನಗಳಿಂದಲೇ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಬೆಟ್ಟಕ್ಕೆ ಆಗಮಿಸಿದ್ದಾರೆ. ಮಾದಪ್ಪನ ಗರ್ಭಗುಡಿಯನ್ನು ವಿವಿಧ ಫಲಪುಷ್ಪಗಳಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು.

ಮುಂಜಾನೆಯಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ, ಬೆಳ್ಳಿ ರಥೋತ್ಸವ ಸೇರಿದಂತೆ ಹಲವು ಸೇವೆಗಳು ನಡೆದವು. ಇಂದು ರಾತ್ರಿ ಮಾದಪ್ಪನಿಗೆ ‘ಎಣ್ಣೆ ಮಜ್ಜನ’ ಸೇವೆ ನಡೆಯಲಿದ್ದು, ಭಕ್ತರು ಇಡೀ ರಾತ್ರಿ ಜಾಗರಣೆ ಮಾಡುವ ಮೂಲಕ ಶಿವನ ಆರಾಧನೆಯಲ್ಲಿ ತೊಡಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !