February 15, 2026
Sunday, February 15, 2026
spot_img

ಗ್ಯಾರಂಟಿ ಕಾಪಿ ಮಾಡುವವರಿಂದ ನಾವೇನು ಕಲಿಯಬೇಕಿಲ್ಲ: ಸಚಿವ ಎಂ.ಬಿ. ಪಾಟೀಲ್ ಟಾಂಗ್

ಹೊಸದಿಗಂತ ವಿಜಯಪುರ:

ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ವಿದೇಶ ಪ್ರವಾಸ ಹೋದರೆ ತಪ್ಪೇನು? ಯಾರೂ ರಾಜಕೀಯಕ್ಕಾಗಿ ಅಥವಾ ಗುಂಪುಗಾರಿಕೆ ಮಾಡಲು ಹೋಗುತ್ತಿಲ್ಲ. ಸಮಿತಿಗಳ ಪ್ರವಾಸದ ಅಂಗವಾಗಿ ಶಾಸಕರು ಒಟ್ಟಾಗಿ ಹೋಗುತ್ತಾರೆ. ನಾನು ಕೂಡ ಮುಂದಿನ ದಿನಗಳಲ್ಲಿ ಜರ್ಮನಿ ಪ್ರವಾಸ ಕೈಗೊಳ್ಳಲಿದ್ದೇನೆ,” ಎಂದು ಸ್ಪಷ್ಟಪಡಿಸಿದರು.

ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಕುರಿತು ಮಾತನಾಡಿದ ಸಚಿವರು, ಭಾರತ ತಂಡಕ್ಕೆ ಶುಭ ಹಾರೈಸಿದರು. “ನೂರಕ್ಕೆ ನೂರರಷ್ಟು ಭಾರತ ಗೆಲ್ಲುವ ವಿಶ್ವಾಸ ನನಗಿದೆ. ಟೀಮ್ ಇಂಡಿಯಾ ಪಾಕಿಸ್ತಾನವನ್ನು ನಿರಾಯಾಸವಾಗಿ ಸೋಲಿಸಿ ಕ್ರೀಡಾಭಿಮಾನಿಗಳಿಗೆ ಸಂಭ್ರಮ ತರಲಿದೆ,” ಎಂದರು.

ಬಿಜೆಪಿ ಬಿಡುಗಡೆ ಮಾಡಿರುವ ಪೋಸ್ಟರ್‌ಗಳ ಬಗ್ಗೆ ಕಿಡಿಕಾರಿದ ಅವರು, “ಬಿಜೆಪಿಯವರು ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಏನು ಸಾಧನೆ ಮಾಡಿದ್ದಾರೆ? ನಾವು ಸಾವಿರ ದಿನಗಳಲ್ಲಿ 70 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿ ನೀಡಿದ್ದೇವೆ. ನಿನ್ನೆಯಷ್ಟೇ 2 ಲಕ್ಷಕ್ಕೂ ಅಧಿಕ ಭೂ ಕಾರ್ಡ್ ವಿತರಿಸಿದ್ದೇವೆ. ಮೊದಲು ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಪ್ರಧಾನಿ ಮೋದಿಯವರೇ ಈಗ ನಮ್ಮನ್ನು ಕಾಪಿ ಮಾಡುತ್ತಿದ್ದಾರೆ,” ಎಂದು ಟೀಕಿಸಿದರು.

ಬಿಜೆಪಿಯ ಆಂತರಿಕ ಕಚ್ಚಾಟವನ್ನು ನೆನಪಿಸಿದ ಸಚಿವರು, “ಬಿಜೆಪಿ ಅಧಿಕಾರದಲ್ಲಿದ್ದ ನಾಲ್ಕು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾದರು. ಯಡಿಯೂರಪ್ಪನವರಿಗೆ ಪೂರ್ಣಾವಧಿ ಕೆಲಸ ಮಾಡಲು ಅವರೇ ಬಿಡಲಿಲ್ಲ. ಈ ಬಗ್ಗೆ ವಿಜಯೇಂದ್ರ ಅವರಿಗೆ ತಿಳಿಸಿ. ಸಿದ್ದರಾಮಯ್ಯನವರು ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ, ನಾವು ಬಿಜೆಪಿಯಿಂದ ಕಲಿಯುವುದು ಏನೂ ಇಲ್ಲ,” ಎಂದು ವಾಗ್ದಾಳಿ ನಡೆಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !