ಹೊಸದಿಗಂತ ಕಲಬುರಗಿ:
ಜಿಲ್ಲೆಯ ಆಳಂದ ಪಟ್ಟಣದ ಐತಿಹಾಸಿಕ ಹಾಗೂ ವಿವಾದಿತ ಹಜರತ್ ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಲಾಯಿತು.
ಕಳೆದ ಕೆಲವು ದಿನಗಳಿಂದ ರಾಜ್ಯಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಈ ವಿಷಯವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂತಿಮವಾಗಿ ನ್ಯಾಯಾಲಯದ ಹಸಿರು ನಿಶಾನೆ ಸಿಕ್ಕ ಹಿನ್ನೆಲೆಯಲ್ಲಿ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆಯ್ದ 14 ಮಂದಿ ಹಿಂದೂ ಮುಖಂಡರು ದರ್ಗಾ ಪ್ರವೇಶಿಸಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.
ಪೂಜೆಗಾಗಿ ಆಗಮಿಸಿದ ಭಕ್ತರನ್ನು ಪೊಲೀಸರು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಿದ ನಂತರವಷ್ಟೇ ದರ್ಗಾ ಆವರಣದೊಳಗೆ ಪ್ರವೇಶಿಸಲು ಅನುಮತಿಸಲಾಯಿತು.
ಮೂಲ ಅರ್ಜಿದಾರರಾದ ಸಿದ್ರಾಮಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರಿಂದ, ನ್ಯಾಯಾಲಯ ನಿಗದಿಪಡಿಸಿದ ಸಮಯದಲ್ಲಿ ಪೂಜಾ ಕಾರ್ಯಕ್ರಮಗಳು ಸುಗಮವಾಗಿ ಮುಕ್ತಾಯಗೊಂಡವು.
ನ್ಯಾಯಾಲಯದ ಸೂಚನೆಯಂತೆ ಸಿದ್ರಾಮಯ್ಯ ಹಿರೇಮಠ, ಹರ್ಷಾನಂದ ಗುತ್ತೇದಾರ, ಗುರುಶಾಂತ ಟೆಂಗಳಿ ಸೇರಿದಂತೆ ರಾಕೇಶ ಜಮಾದಾರ, ಶಿವರಾಜ ಬಾಳಿ, ಶಿವಪುತ್ರ ನಡಗೇರಿ, ಅಶೋಕ ಬಗಲಿ, ಮಲ್ಲಿಕಾರ್ಜುನ ಸಾವಳಗಿ, ಮಲ್ಲಿಕಾರ್ಜುನ ಕಂದಗೂಳೆ, ವೀರಣ್ಣಾ ಹತ್ತರಕಿ, ರಾಜು ಚವ್ಹಾಣ, ಹಣಮಂತರಾವ ಪಾಟೀಲ್, ರವಿ ಮದಕರ ಹಾಗೂ ಮಲ್ಕಣ್ಣಾ ಹಿರೇ ಪೂಜಾರಿ ಅವರು ಶಿವಲಿಂಗಕ್ಕೆ ಭಕ್ತಿಪೂರ್ವಕ ಸೇವೆ ಸಲ್ಲಿಸಿದರು.



