February 15, 2026
Sunday, February 15, 2026
spot_img

ಕಿಶನ್-ತಿಲಕ್ ಭರ್ಜರಿ ಜೊತೆಯಾಟ: ಪಾಕ್ ಬೌಲರ್‌ಗಳ ಬೆವರಿಳಿಸಿದ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ಮಾರಕ ವೇಗಿ ಶಾಹೀನ್ ಶಾ ಅಫ್ರಿದಿ ಅವರ ಎಸೆತಗಳನ್ನು ಭಾರತದ ಯುವ ಬ್ಯಾಟರ್ ಇಶಾನ್ ಕಿಶನ್ ಸಿಡಿಲಬ್ಬರದ ಮೂಲಕ ಸ್ವಾಗತಿಸಿದ್ದಾರೆ. ಆರಂಭದಲ್ಲೇ ಪಾಕ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಕಿಶನ್, ಕ್ರೀಸ್‌ಗೆ ಬಂದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.

ಇದೇ ಟೂರ್ನಿಯಲ್ಲಿ ಈ ಹಿಂದೆ ಅಭಿಷೇಕ್ ಶರ್ಮಾ ಅವರು ಅಫ್ರಿದಿ ಎಸೆದ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದರು. ಈಗ ಅದೇ ಹಾದಿ ತುಳಿದ ಇಶಾನ್ ಕಿಶನ್, ಅಫ್ರಿದಿಯ ಮೊದಲ ಓವರ್‌ನಲ್ಲೇ ಸಿಕ್ಸರ್ ಸಿಡಿಸಿ ಬಿಸಿ ಮುಟ್ಟಿಸಿದರು. ಎರಡನೇ ಓವರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಇಶಾನ್, ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರೆ, ಅವರಿಗೆ ಸಾಥ್ ನೀಡಿದ ತಿಲಕ್ ವರ್ಮಾ ಕೂಡ ಒಂದು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಭಾರತದ ಖಾತೆಗೆ ಒಟ್ಟು 15 ರನ್‌ಗಳು ಸೇರಿದವು.

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರೂ, ಕಿಶನ್ ಎದೆಗುಂದಲಿಲ್ಲ. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಪಾಕ್ ಬೌಲರ್‌ಗಳನ್ನು ಕಂಗೆಡಿಸಿದರು. ಅಂತಿಮವಾಗಿ 40 ಎಸೆತಗಳಲ್ಲಿ 77 ರನ್ (10 ಬೌಂಡರಿ, 3 ಸಿಕ್ಸರ್) ಗಳಿಸಿದ ಕಿಶನ್, ಬೌಲ್ಡ್ ಆಗುವ ಮೂಲಕ ತಮ್ಮ ಅಮೋಘ ಇನ್ನಿಂಗ್ಸ್ ಅಂತ್ಯಗೊಳಿಸಿದರು.

ತಂಡದ ಮೊತ್ತ 88 ರನ್ ಆಗಿದ್ದಾಗ ಇಶಾನ್ ಕಿಶನ್ ಔಟಾದರು. ವಿಶೇಷವೆಂದರೆ, ಎರಡನೇ ವಿಕೆಟ್‌ಗೆ ಇಶಾನ್ ಮತ್ತು ತಿಲಕ್ ವರ್ಮಾ ಜೋಡಿ ಕೇವಲ 46 ಎಸೆತಗಳಲ್ಲಿ 87 ರನ್‌ಗಳ ಸ್ಫೋಟಕ ಜೊತೆಯಾಟವಾಡಿತು. ಈ ಭರ್ಜರಿ ಮೊತ್ತದಲ್ಲಿ ಇಶಾನ್ ಕಿಶನ್ ಅವರ ಪಾಲು ಬರೋಬ್ಬರಿ 76 ರನ್ ಆಗಿದ್ದು, ಅವರ ಏಕಪಕ್ಷೀಯ ಬ್ಯಾಟಿಂಗ್ ಅಬ್ಬರಕ್ಕೆ ಈ ಅಂಕಿಅಂಶವೇ ಸಾಕ್ಷಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !