ಮನೆಯ ಅಡುಗೆಮನೆ ಅಂದವಾಗಿ ಕಾಣಲು ಸ್ವಚ್ಛತೆ ಬಹಳ ಮುಖ್ಯ. ವಿಶೇಷವಾಗಿ ಮರದಿಂದ ಮಾಡಿದ ಸ್ಪೂನ್, ಬೌಲ್, ಪಾತ್ರೆಗಳು ಇತ್ತೀಚೆಗೆ ಹೆಚ್ಚಿಗೆ ಬಳಕೆಗೆ ಬರುತ್ತಿವೆ. ಇವು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವೆಂಬ ನಂಬಿಕೆ ಇರುವುದರಿಂದ ಹಲವರು ಸ್ಟೀಲ್ ಸಾಮಾನುಗಳ ಬದಲಿಗೆ ಮರದ ಸಾಮಾನುಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ ಇವುಗಳನ್ನು ತೊಳೆಯುವುದು ಅಷ್ಟು ಸುಲಭವಲ್ಲ. ಎಣ್ಣೆ, ಮಸಾಲೆ ಮತ್ತು ಕಲೆಗಳು ಮರದ ಮೇಲ್ಮೈಗೆ ಅಂಟಿಕೊಂಡು ಬೇಗ ಹೋಗುವುದಿಲ್ಲ. ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ದುರ್ವಾಸನೆ ಅಥವಾ ಆಹಾರ ಹಾಳಾಗುವ ಸಾಧ್ಯತೆಯೂ ಇರುತ್ತದೆ.
ಮರದ ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ತುಂಬಾ ಗಟ್ಟಿಯಾಗಿ ಒರೆಸಬಾರದು. ಹೀಗೆ ಮಾಡಿದರೆ ಮೇಲ್ಮೈ ಮೇಲೆ ಸ್ಕ್ರಾಚ್ ಉಂಟಾಗಿ ಪಾತ್ರೆ ಹಾನಿಯಾಗಬಹುದು. ಇದರ ಬದಲು ಮನೆಯಲ್ಲೇ ಇರುವ ಸರಳ ಪದಾರ್ಥಗಳನ್ನು ಬಳಸಬಹುದು.
ಇದನ್ನೂ ಓದಿ:
ಮೊದಲು ಬೆಚ್ಚಗಿನ ನೀರು ಮತ್ತು ಸಾಬೂನಿನಿಂದ ಪಾತ್ರೆಯನ್ನು ತೊಳೆಯಿರಿ. ನಂತರ ಸ್ವಲ್ಪ ಉಪ್ಪನ್ನು ಪಾತ್ರೆಯ ಮೇಲ್ಮೈಗೆ ಉಜ್ಜಿ, ಅರ್ಧ ನಿಂಬೆಹಣ್ಣಿನಿಂದ ಮೃದುವಾಗಿ ಉಜ್ಜಿ. ಉಪ್ಪು ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ, ನಿಂಬೆ ದುರ್ವಾಸನೆಯನ್ನು ದೂರ ಮಾಡುತ್ತದೆ. ಕೊನೆಯಲ್ಲಿ ತಣ್ಣೀರಿನಿಂದ ತೊಳೆದು ಚೆನ್ನಾಗಿ ಒಣಗಿಸಿದರೆ ಮರದ ಸಾಮಾನುಗಳು ಮತ್ತೆ ಹೊಸತರಂತೆ ಹೊಳೆಯುತ್ತವೆ.



