April 17, 2026
Friday, April 17, 2026
spot_img

ಹಳೇ ಹಗೆತನಕ್ಕೆ ಬೈಕ್ ನೆಪ: ಒಂದೇ ಕುಟುಂಬದ ಆರು ಮಂದಿಯ ಮೇಲೆ ಭೀಕರ ಹ*ಲ್ಲೆ!

ಹೊಸದಿಗಂತ ತುಮಕೂರು:

ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ ನಡೆದ ಭೀಕರ ದಾಳಿಯು ಜನತೆಯನ್ನು ಬೆಚ್ಚಿಬೀಳಿಸಿದೆ. ಬೈಕ್ ನಿಲ್ಲಿಸುವ ವಿಚಾರದಲ್ಲಿ ಶುರುವಾದ ಮಾತಿನ ಚಕಮಕಿ ಕೊನೆಗೆ ರಕ್ತಪಾತದಲ್ಲಿ ಅಂತ್ಯವಾಗಿದ್ದು, ಒಂದೇ ಕುಟುಂಬದ ಆರು ಮಂದಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದಾರೆ.

ಅಮ್ಮನಘಟ್ಟದ ಮಾರುತಿನಗರ ಬಡಾವಣೆಯ ನಿವಾಸಿ ದಿಲೀಪ್ ಸಂಜೆ ಗುಬ್ಬಿಯಿಂದ ಮನೆಗೆ ಹಿಂದಿರುಗಿದಾಗ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿದ್ದರು. ಇದನ್ನೇ ನೆಪವಾಗಿಸಿಕೊಂಡ ನೆರೆಮನೆಯ ಎಂಟು ಮಂದಿ ಏಕಾಏಕಿ ಅಶ್ಲೀಲ ಪದಗಳಿಂದ ನಿಂದಿಸಲು ಆರಂಭಿಸಿದರು. ದಿಲೀಪ್ ಬೈಕ್ ತೆಗೆಯುವ ಮೊದಲೇ ದೊಣ್ಣೆ, ಗುದ್ದಲಿ ಹಾಗೂ ಕಬ್ಬಿಣದ ಸಳುಗಳಂತಹ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ಈ ಮೃಗೀಯ ದಾಳಿಯಲ್ಲಿ ಹನುಮಂತಯ್ಯ, ದಿಲೀಪ್, ಜಯಮ್ಮ, ವೆಂಕಟೇಶ್ ಹಾಗೂ ಪದ್ಮ ಎಂಬುವವರ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತದ ಕೋಡಿ ಹರಿದಿದೆ. ದಿಲೀಪ್ ಅವರ ಕೈ ಮೂಳೆ ಮುರಿತವಾಗಿದ್ದು, ಎಲ್ಲರೂ ಪ್ರಸ್ತುತ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಇದು ಕೇವಲ ಬೈಕ್ ವಿಚಾರಕ್ಕೆ ನಡೆದ ಜಗಳವಲ್ಲ. ಹಳೇ ದ್ವೇಷವನ್ನು ಇಟ್ಟುಕೊಂಡು ಮೊದಲೇ ಸಿದ್ಧತೆ ಮಾಡಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಗಾಯಾಳು ದಿಲೀಪ್ ಗಂಭೀರವಾಗಿ ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿರುವ ಗುಬ್ಬಿ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳಾದ ಯುವರಾಜ್, ಸಂಜಯ್, ಮಂಜಮ್ಮ, ರವೀಶ್, ಹೇಮಂತ್, ಶಾಂತರಾಜು, ಲಕ್ಷ್ಮಮ್ಮ ಮತ್ತು ಮೂಡಲಗಿರಿ ವಿರುದ್ಧ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.

“ಕಾನೂನನ್ನು ಕೈಗೆತ್ತಿಕೊಂಡು ಅಮಾನವೀಯವಾಗಿ ವರ್ತಿಸಿರುವ ಈ ಕುಟುಂಬಕ್ಕೆ ಕಠಿಣ ಶಿಕ್ಷೆಯಾಗಬೇಕು. ಮುಂದೆ ಯಾರೂ ಇಂತಹ ಸಾಹಸಕ್ಕೆ ಕೈಹಾಕದಂತೆ ಕಾನೂನಿನ ಪಾಠ ಕಲಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !