April 15, 2026
Wednesday, April 15, 2026
spot_img

ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಹೊಸ ಇತಿಹಾಸದ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದ “ಅಜೇಯ” ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ನಡುವೆ ಅಧಿಕಾರ ಹಂಚಿಕೆಯ ಚರ್ಚೆಗಳು ನಡೆಯುತ್ತಿದ್ದರೂ, ಅದಾವುದಕ್ಕೂ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ, ರಾಜ್ಯದ ಆರ್ಥಿಕ ಭವಿಷ್ಯವನ್ನು ನಿರ್ಧರಿಸುವ 2026-27ನೇ ಸಾಲಿನ ಬಜೆಟ್ ಮಂಡನೆಗೆ ದಿನಾಂಕ ನಿಗದಿಪಡಿಸಿದ್ದಾರೆ.

ವಿಧಾನಸಭೆ ಕಾರ್ಯದರ್ಶಿಗಳು ಇಂದು ಹೊರಡಿಸಿರುವ ಅಧಿಕೃತ ಪ್ರಕಟಣೆಯಂತೆ ಬಜೆಟ್ ವಿವರಗಳು ಹೀಗಿವೆ:

ಬಜೆಟ್ ಮಂಡನೆ: ಮಾರ್ಚ್ 6, 2026 (ಬೆಳಗ್ಗೆ 10:15ಕ್ಕೆ)

ಅಧಿವೇಶನದ ಅವಧಿ: ಮಾರ್ಚ್ 6 ರಿಂದ ಮಾರ್ಚ್ 27 ರವರೆಗೆ.

ಒಟ್ಟು ಕಲಾಪ: 14 ದಿನಗಳ ಕಾಲ ಚರ್ಚೆ ನಡೆಯಲಿದೆ.

ಈ ಬಾರಿಯ ಬಜೆಟ್ ಮಂಡನೆ ಕೇವಲ ಅಂಕಿ-ಅಂಶಗಳ ಆಟವಲ್ಲ, ಇದು ಸಿದ್ದರಾಮಯ್ಯನವರ ವೈಯಕ್ತಿಕ ಸಾಧನೆಯ ಶಿಖರವೂ ಹೌದು.

ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಎಂಬ ದಾಖಲೆ ಇವರದಾಗಲಿದೆ. ಕರ್ನಾಟಕದ ದೈತ್ಯ ನಾಯಕ ಡಿ. ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನು (2,789 ದಿನಗಳು) ಸಿದ್ದರಾಮಯ್ಯ ಈಗಾಗಲೇ ಮೀರಿದ್ದಾರೆ. ಈ ಮೂಲಕ ಅತಿ ಹೆಚ್ಚು ಕಾಲ ಸಿಎಂ ಗಾದಿಯಲ್ಲಿ ಕುಳಿತ ಹೆಗ್ಗಳಿಕೆ ಈಗ ಸಿದ್ದರಾಮಯ್ಯನವರ ಪಾಲಾಗಿದೆ.

ಸಿದ್ದರಾಮಯ್ಯನವರು ಈಗಾಗಲೇ ಇಲಾಖಾವಾರು ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದು, ಮುಂಬರುವ ಚುನಾವಣೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ದೃಷ್ಟಿಯಿಂದ ಈ ಬಜೆಟ್ ಅತ್ಯಂತ ಮಹತ್ವದ್ದಾಗಿದೆ. 2013-2018ರ ಪೂರ್ಣ ಅವಧಿ ಹಾಗೂ 2023ರಿಂದ ಈವರೆಗಿನ ಅವರ ಆಡಳಿತ ಚಾತುರ್ಯವು ಈ ಆಯವ್ಯಯದಲ್ಲಿ ಪ್ರತಿಫಲಿಸುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !