September 17, 2026
Thursday, September 17, 2026
spot_img

ವಂದೇ ಮಾತರಂ ವಿವಾದ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಮುಂದಾದ ಬಿಜೆಪಿ ಕಾರ್ಯಕರ್ತರು, ಪೊಲೀಸರಿಂದ ತಡೆ

ಹೊಸದಿಗಂತ ವರದಿ ಬೀದರ್:

‘ವಂದೇ ಮಾತರಂ’ ಗೀತೆಗೆ ಅಗೌರವ ತೋರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಬೀದರ್‌ನ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಮುಂದಾದರೂ, ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡು ಮುತ್ತಿಗೆ ಯತ್ನವನ್ನು ತಡೆದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಶಶಿ ಹೊಸಳ್ಳಿ ಮಾತನಾಡಿ, ‘ವಂದೇ ಮಾತರಂ’ ಕೇವಲ ಗೀತೆಯಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರಲ್ಲಿ ರಾಷ್ಟ್ರಭಕ್ತಿ ಮತ್ತು ದೇಶಾಭಿಮಾನದ ಭಾವನೆ ಮೂಡಿಸಿದ ಮಹತ್ವದ ರಾಷ್ಟ್ರೀಯ ಗೀತೆಯಾಗಿದೆ. ಇಂತಹ ಗೀತೆಗೆ ಅಗೌರವ ತೋರುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

‘ವಂದೇ ಮಾತರಂ’ ಹಾಡುತ್ತಿದ್ದ ವೇಳೆ ಕೈ ಸನ್ನೆ ಮೂಲಕ ಗೀತೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಶಶಿ ಹೊಸಳ್ಳಿ ಆಗ್ರಹಿಸಿದರು.

ದೇಶದ ಸಂಸ್ಕೃತಿ, ಸಂಪ್ರದಾಯ, ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ರಾಷ್ಟ್ರಭಾವನೆಗೆ ಪ್ರತಿಯೊಬ್ಬರೂ ಗೌರವ ನೀಡಬೇಕು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತರುವಂತಹ ವರ್ತನೆ ಇರಬಾರದು ಎಂದು ಅವರು ಹೇಳಿದರು.

ಇದನ್ನೂ ಓದಿ:

ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಘಟನೆಗೆ ಕಾರಣರಾದವರ ವಿರುದ್ಧ ಪಕ್ಷದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಂಡು, ಇಂತಹ ಘಟನೆಗಳು ಮರುಕಳಿಸದಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ವೇಳೆ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

ಪ್ರತಿಭಟನೆಯಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ ಸ್ವಾಮಿ, ರಮೇಶ ಕಲ್ಲೂರ, ದೀಪಕ ಗಾದಗಿ, ರಾಜೇಂದ್ರ ಪೂಜಾರಿ, ಗಣೇಶ್ ಭೋಸ್ಲೆ, ರೋಷನ್ ವರ್ಮಾ, ನಿತಿನ್ ನವಲಕಲೆ, ನರೇಶ್ ಗೌಳಿ, ಸಚಿನ ಮಠಪತಿ, ಶರಣು ಸಿದ್ದವೀರ, ವೀರೇಂದ್ರ ಪಾಟೀಲ, ಬಾಲಾಜಿ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !