ಹೊಸದಿಗಂತ ವರದಿ ಬೀದರ್:
ಬೀದರ್ ಜಿಲ್ಲೆಯ ಅಭಿವೃದ್ಧಿ, ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಮತ್ತು ಸ್ಥಳೀಯರ ನಿರೀಕ್ಷೆಗಳು ಇದೀಗ ಮತ್ತೆ ಚರ್ಚೆಗೆ ಬಂದಿವೆ. ಮುಂಬರುವ 2026-27ನೇ ಸಾಲಿನ ರಾಜ್ಯ ಬಜೆಟ್ ಜಿಲ್ಲೆಯ ಭವಿಷ್ಯಕ್ಕೆ ಹೊಸ ದಾರಿ ತೋರಿಸಬಹುದೇ ಎಂಬ ಪ್ರಶ್ನೆ ಸಾರ್ವಜನಿಕರ ನಡುವೆ ಮೂಡಿದೆ. ಹಿಂದುಳಿದ ಪ್ರದೇಶಗಳ ಸಾಲಿನಲ್ಲಿ ಗುರುತಿಸಲ್ಪಡುವ ಈ ಭಾಗಕ್ಕೆ ಹಲವು ಮೂಲಭೂತ ಸೌಲಭ್ಯಗಳು ಹಾಗೂ ಕೈಗಾರಿಕಾ ಅವಕಾಶಗಳು ಸಿಗಬೇಕೆಂಬ ಬೇಡಿಕೆ ಹೆಚ್ಚಾಗಿದೆ.
ಹಿಂದುಳಿದ ಪ್ರದೇಶಗಳ ಸಾಲಿನಲ್ಲಿ ಗುರುತಿಸಲ್ಪಡುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 1948ರಲ್ಲಿ ಸ್ವಾತಂತ್ರ್ಯ ಪಡೆದು ಇಂದಿಗೆ ಸರಿಯಾಗಿ 77 ವರ್ಷ ಕಳೆದಿವೆ, ಆರೂ ಜಿಲ್ಲೆಗಳನ್ನೂ ಪರಿಗಣಿಸಿದಾಗ ಬೀದರ್ ಜಿಲ್ಲೆ ಅತಿ ಹಿಂದುಳಿದ ಭಾಗಕ್ಕೆ ಸೇರುತ್ತದೆ. ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ನೀಡುವಂತಹ ಯಾವುದೇ ಕೈಗಾರಿಕೆಗಳಿಲ್ಲ, ಐಟಿ ಪಾರ್ಕ್ ಗಳಿಲ್ಲ, ಶೈಕ್ಷಣಿಕವಾಗಿಯೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಶಿಕ್ಷಣ ಸಂಸ್ಥೆಗಳು ಬೆಳೆದಿಲ್ಲ, ಕೃಷಿ ವಿಚಾರಕ್ಕೆ ಬಂದರೆ ಸಕ್ಕರೆ ಕಾರ್ಖಾನೆಗಳಿವೆ ಆದರೆ ಸಿಗಬೇಕಾದ ರೈತರ ಹಕ್ಕಿನ ಬೆಂಬಲ ಬೆಲೆಯೂ ಜಿಲ್ಲಾಡಳಿತ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ರಾಜ್ಯದಲ್ಲೇ ಅತಿ ಕಡಿಮೆ ನೀಡಲಾಗುತ್ತಿದೆ.
ಕೃಷಿಗೆ ಬೆನ್ನೆಲುಬಾಗಿ ನಿಲ್ಲುವ ಫುಡ್ ಪಾರ್ಕ್ ಗಳಿಲ್ಲ, ಕೃಷಿ ಯಂತ್ರೋಪಕರಣ ತಯಾರಿಸುವ ಕಾರ್ಖಾನೆಗಳಿಲ್ಲ, ಕೃಷಿಗೆ ಆಧಾರ ನೀಡಬೇಕಾಗಿದ್ದ ಕಾರಂಜಾ ನೀರಾವರಿ ಯೋಜನೆ ಕೃಷಿ ಚಟುವಟಿಕೆಗಳಿಗೆ ನೀರು ಮುಟ್ಟಿಸುವಲ್ಲಿ ವಿಫಲವಾಗಿ ಹೆಸರಿಗೆ ಮಾತ್ರ ಬೃಹತ್ ನೀರಾವರಿ ಯೋಜನೆ ಈಗ ಕುಡಿಯುವ ನೀರು ಸರಬರಾಜು ಯೋಜನೆಯಾಗಿ ಮಾರ್ಪಟ್ಟಿದೆ. ರಾಜ್ಯದ ಇತಿಹಾಸದಲ್ಲೇ ಅತಿ ಹಳೆಯ ಕನ್ನಡದ ಹಲ್ಮಿಡಿ ಶಾಸನ ಕಲ್ಯಾಣದ ಚಾಲುಕ್ಯರ ಕಾಲದಭಾಗವಾಗಿದ್ದ ಬೀದರ್ ಜಿಲ್ಲೆಯ ಬಸವಕಲ್ಯಾಣ ಪ್ರದೇಶದಲ್ಲಿದೆ, ಪ್ರೇಕ್ಷಣೀಯ ಅನೇಕ ಸ್ಥಳಗಳಿದ್ದರೂ ಹಿಂದಿನಿಂದಲೂ ಈಗಿನ ವರೆಗೆ ಆಳಿ ಹೋದ ರಾಜ್ಯ ಸರ್ಕಾರಗಳು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಲಕ್ಷ್ಯ ವಹಿಸಿದ ಕಾರಣ ಅನೇಕ ಐತಿಹಾಸಿಕ ಹಿನ್ನೆಲೆಯ ಸ್ಥಳಗಳು ಪಾಳು ಬಿದ್ದಿರುವ ಸ್ಥಿತಿಯಲ್ಲಿವೆ.
ಐತಿಹಾಸಿಕ ದೇವಸ್ಥಾನಗಳು ಶಿಥಿಲಾವಸ್ಥೆಯಲ್ಲಿವೆ ಇದಕ್ಕೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಕಲ್ಯಾಣ ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ, ಬೀದರಿನ ಸುಪ್ರಸಿದ್ಧ ಝರಣಿ ನರಸಿಂಹ ದೇವಸ್ಥಾನ, ಔರಾದ್ ನಲ್ಲಿರುವ ಅಮರೇಶ್ವರ ದೇವಸ್ಥಾನ, ಮಾರ್ಕಂಡೇಯ ಋಷಿ ತಪಸ್ಸು ಮಾಡಿದ ಏಕೈಕ ಧಾರ್ಮಿಕ ಸ್ಥಳ ಮೋರಖಂಡಿಯ ಸಿದ್ದೇಶ್ವರ ದೇವಸ್ಥಾನ, ಹೀಗೆ ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರತೀಕ ದೇವಸ್ಥಾನಗಳು ಇಂದು ದಯನೀಯ ಸ್ಥಿತಿಯಲ್ಲಿವೆ.
ಜಿಲ್ಲೆಯ ಆರೋಗ್ಯ ಸೇವೆ ಬಗ್ಗೆ ಗಮನಿಸಿದಾಗ ದಶಕದ ಹಿಂದೆ ಆರಂಭವಾದ ಜಿಲ್ಲೆಯಲ್ಲಿ ಇರುವುದು ಒಂದೇ ಒಂದು ಮೆಡಿಕಲ್ ಕಾಲೇಜು, ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಬೇಕಾದಂತಹ ಸಾಮಾನ್ಯ ಸಲಕರಣೆಗಳು ಸಹ ಆಸ್ಪತ್ರೆಯಲ್ಲಿ ಚಾಲ್ತಿಯಲ್ಲಿಲ್ಲ. MRI, CT Scan, ಸಂಪೂರ್ಣ ಪ್ಯಾಥೋಲಜಿ ಲ್ಯಾಬ್, ಹೃದ್ರೋಗ ಹಾಗೂ ವಿವಿಧೋದ್ದೇಶ ಶಸ್ತ್ರಚಿಕಿತ್ಸಾ ಘಟಕವೂ ನುರಿತ ವೈದ್ಯರು ಹಾಗೂ ಸಲಕರಣೆಗಳಿಲ್ಲದ ಕಾರಣ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಭ್ರಷ್ಟಾಚಾರದ ಸುಳಿಗೆ ಸಿಲುಕಿ ಬ್ರೀಮ್ಸ್ ಆಸ್ಪತ್ರೆ ಅಧೋಮಯ ಸ್ಥಿತಿಯಲ್ಲಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಗಲಿ ಅಥವಾ ಸಚಿವ ರಹೀಂ ಖಾನ್ ಈ ಕುರಿತು ಕ್ಯಾರೆ ಎನ್ನುತ್ತಿಲ್ಲ.
ಜಿಲ್ಲೆಯ ಬೇಡಿಕೆಗೆ ಬೇಕಿದೆ ಸರ್ಕಾರದ ಅಸ್ತು: ಜಿಲ್ಲೆಯ ಅಭಿವೃದ್ಧಿಗೆ ಪೂರಕ ಎನ್ನುವುದಾದರೆ 10 ಬಹು ಮುಖ್ಯ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಮೋದನೆ ನೀಡಬೇಕು ಇದರಲ್ಲಿ ಮೊಟ್ಟಮೊದಲು
- ಕೃಷಿಗೆ ಪೂರಕ ಎನ್ನುವುದಾದರೆ ಗೋದಾವರಿ ಬೇಸಿನ್ ಬಚಾವತ್ ಅವಾರ್ಡ್ ಪ್ರಕಾರ ಗೋದಾವರಿ ಜಲಾನಯನ ಪ್ರದೇಶದ 24 ನೀರು ಟಿಎಂಸಿ ನೀರಿನ ಸದ್ಬಳಕೆಗೆ ಬ್ರಿಡ್ಜ್ ಕಂ ಬ್ಯಾರೇಜ್ ಅಥವಾ ಚೆಕ್ ಡ್ಯಾಮ್ ನಿರ್ಮಿಸುವ ಯೋಜನೆ.
- ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲ ಆಗಲು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬೀದರ್ – ಹುಮನಾಬಾದ್ ತಾಲೂಕಿನಲ್ಲಿ ಬೃಹತ್ ಕೈಗಾರಿಕಾ ವಸಾಹತು ಪ್ರದೇಶದ ಜೊತೆಗೆ ಸ್ಪೇಷಲ್ ಏಕೋನಾಮಿಕ್ ಝೋನ್ ನಿರ್ಮಾಣ,
- ಬೀದರ್ ನಗರ ತೆಲಂಗಾಣದ ರಾಜಧಾನಿ ಹೈದರಾಬಾದ್ ಹಾಗೂ ಮಹಾರಾಷ್ಟ್ರದ ಪುಣೆ, ಮುಂಬೈ ಹಾಗೂ ಔರಂಗಾಬಾದ್ ನಗರಗಳಿಗೆ ಸಮೀಪದಲ್ಲಿದೆ, ಜಿಲ್ಲೆಯಲ್ಲಿ ಫುಡ್ ಪಾರ್ಕ್ ಸ್ಥಾಪನೆಯಾದರೆ ಈ ಮಹಾನಗರಗಳಿಗೆ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಪೂರೈಸಲು ಹಾಗೂ ಸ್ಥಳೀಯವಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ವಿಶ್ವವಿದ್ಯಾಲಯ ಇರುವ ಕಾರಣ ಜೈವಿಕ ಕೃಷಿಗೂ ಪ್ರೋತ್ಸಾಹ ನೀಡಬಹುದು.
- ಜಿಲ್ಲೆಯ ವಿಪುಲ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳು ಇದ್ದು ಹೈದರಾಬಾದ್ ನ ರಾಮೂಜಿ ಫಿಲಂ ಸಿಟಿಯಂತೆ ಬೀದರ್ ನಲ್ಲಿಯೂ ಚಲನಚಿತ್ರ ವಸಾಹತು ಪ್ರದೇಶ ನಿರ್ಮಾಣ. ಇದರಿಂದಾಗಿ ಸ್ಥಳೀಯ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ.
- ಜಗತ್ತಿನ ಪ್ರಪ್ರಥಮ ಜನಪ್ರತಿನಿಧಿಗಳ ಸಂಸತ್ ಅನುಭವ ಮಂಟಪ ಇರುವುದು ಬೀದರ್ ಜಿಲ್ಲೆಯ ಚಾಲುಕ್ಯರು ಆಳಿದ ಬಸವಕಲ್ಯಾಣದ ಪುಣ್ಯ ಭೂಮಿಯಲ್ಲಿ ಶರಣ ಸಾಹಿತ್ಯದ, ಕಲೆ ಸಂಸ್ಕೃತಿಯ ಅಧ್ಯಯನಕ್ಕೆ ಪ್ರೇರಣೆ, ಪ್ರೋತ್ಸಾಹ ನೀಡಲು ಇರುವ ಕಾಲೇಜುಗಳ ಹೆಸರು ಬದಲಾಯಿಸದೆ ಬಸವಕಲ್ಯಾಣದಲ್ಲಿ ಬಸವ ವಿಶ್ವವಿದ್ಯಾಲಯದ ನಿರ್ಮಾಣ ಇದರಿಂದಾಗಿ ವಿಶ್ವದಲ್ಲೇಡೆ ಸಮಾನತೆಯ ಹರಿಕಾರ ಬಿಜ್ಜಳನ ಆಸ್ಥಾನದ ಪ್ರಧಾನಿ ಬಸವಣ್ಣನವರ ರಾಜಕೀಯ, ಸಾಮಾಜಿಕ ವಿಚಾರಧಾರೆ ಅಭ್ಯಸಿಸಲು ಖಾಯಂ ನೆಲೆ ಸಿಕ್ಕಂತಾಗುತ್ತದೆ ಹಾಗೂ ಉದ್ಯೋಗ ಸೃಷ್ಟಿಗೂ ಅನುಕೂಲ ಆಗುತ್ತದೆ.
- ಬೀದರ್ ನಿಂದ ಮಹಾರಾಷ್ಟ್ರದ ನಾಂದೇಡ್ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಅರ್ಧದಷ್ಟು ಅನುದಾನ ಒದಗಿಸಿದರೆ ದಕ್ಷಿಣದಿಂದ ಉತ್ತರಕ್ಕೆ ಸಂಚರಿಸುವ ರೈಲಿನ ಸಂಚಾರ ವೇಳೆಯನ್ನು ಕಡಿತಗೊಳಿಸಲು ಸಹಕಾರಿ ಆಗುತ್ತೆ ಹಾಗೂ ಇಡೀ ದಕ್ಷಿಣ ಭಾರತವನ್ನು ಪರಿಗಣಿಸಿದರೆ ಬೀದರ್ ನಲ್ಲಿರುವ ಸುಪ್ರಸಿದ್ಧ ಸಿಖ್ಖರ ಧಾರ್ಮಿಕ ಸ್ಥಳ ನಾನಕಝಿರಾ, ಸಿಖ್ಖರ ಪ್ರಥಮ ಧರ್ಮಗುರು ಗುರುನಾನಕರು ಸಂಚರಿಸಿದ ಏಕೈಕ ಧಾರ್ಮಿಕ ಸ್ಥಳ, ನಾಂದೇಡ್ ನಲ್ಲಿರುವ ಗುರು ಗೋವಿಂದ ಸಿಂಗ್ ಗುರೂ ದ್ವಾರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಇದರಿಂದ ಅನುಕೂಲವಾಗಲಿದೆ ಹಾಗೆಯೇ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ಸಿಗುತ್ತದೆ.
- ಬೀದರಿನಲ್ಲಿ ಏರ್ ಫೋರ್ಸ್ ಏರ್ ಬೇಸ್ ಇರುವುದು ಸರ್ಕಾರಕ್ಕೆ ತಿಳಿದಿರುವ ಸಂಗತಿ. ಏರ್ ಫೋರ್ಸ್-ರಾಜ್ಯ ಸರ್ಕಾರದ ಒಡಂಬಡಿಕೆಯಲ್ಲಿ ಖಾಸಗಿ ಪೈಲಟ್ ಟ್ರೇನಿಂಗ್ ಹಾಗೂ ಏರ್ ಕ್ರಾಫ್ಟ್ ಮೆಂಟೆನೇನ್ಸ್ ಕಾಲೇಜು ಸ್ಥಾಪನೆ ಆದರೆ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶ ಸೃಷ್ಟಿಯಾಗಬಹುದು. ಹಾಗೂ ಹೆಚ್.ಎ.ಎಲ್ ಒಡಂಬಡಿಕೆಯಲ್ಲಿ ವೈಮಾನಿಕ ಬಿಡಿಭಾಗಗಳ ಘಟಕ ಸ್ಥಾಪನೆ ಆದರೆ ಸ್ಥಳೀಯವಾಗಿ ಪರಿಶೀಲನೆ ಹಾಗೂ ರಫ್ತಿಗೆ ಸಹಕಾರಿಯಾಗಬಹುದು.
- ಜಿಲ್ಲೆಯ ಔರಾದ್ ತಾಲೂಕಿನಲ್ಲಿ ನಿರ್ಮಿಸಬೇಕಾದ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನಗಳ ಇಲಾಖೆ ವತಿಯಿಂದ ಪ್ರಾಯೋಜಿತ 500 ಮೇಗಾವ್ಯಾಟ್ ಯೋಜನೆ ಕಳೆದ ವರ್ಷ ಅಂದರೆ ಡಿಸೆಂಬರ್ 2025 ಅಂತ್ಯಕ್ಕೆ ಮುಗಿಯಬೇಕಿತ್ತು ಆದರೆ ರಾಜ್ಯ ಸರ್ಕಾರ ಜಮೀನು ಒದಗಿಸದ ಕಾರಣ ಈ ಯೋಜನೆ ಶುರು ಆಗಲೇ ಇಲ್ಲ ಈ ಯೋಜನೆ ಪೂರ್ಣಗೊಂಡರೆ ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ಸಿಗಬಹುದು.
- ಬೀದರಿನಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ ಕಳೆದ ಒಂದು ದಶಕದಿಂದ ಅರ್ಧಕ್ಕೆ ನಿಂತಿದೆ ಮಾಹಿತಿ ಪ್ರಕಾರ ಕೇವಲ ಒಂದು ವಿಭಾಗ ಮಾತ್ರ ಕಾರ್ಯನಿರ್ವಹಿಸುತ್ತಿದೆ, ಕಾಮಗಾರಿ ಮುಗಿಸಲು ಅನುದಾನ ಹಾಗೂ ಆದಷ್ಟು ಬೇಗ ಇನ್ನುಳಿದ ವಿಭಾಗಗಳನ್ನು ಆರಂಭಿಸಿದರೆ ಸ್ಥಳೀಯ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಆಗುತ್ತದೆ.
- ಜಿಲ್ಲೆಯ ರೈತರ ಜೀವನಾಡಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರೆ ಜಿಲ್ಲೆಯ 55 ಸಾವಿರಕ್ಕೂ ಅಧಿಕ ರೈತರಿಗೆ ಅನುಕೂಲವಾಗಲಿದೆ. ಹಾಗೆಯೇ ಕಳೆದ ಆರು ದಶಕಗಳಿಂದ ಪ್ರತಿಭಟಿಸುತ್ತಿರುವ 28 ಗ್ರಾಮಗಳ ಕಾರಂಜಾ ಯೋಜನೆ ಸಂತ್ರಸ್ತರಿಗೆ ಪರಿಹಾರ ವಿತರಿಸಲು ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಬೇಕೆಂದು ರೈತರ ಆಶಯವಾಗಿದೆ.
ದಿವಾಳಿಯಾಗಿರುವ ರಾಜ್ಯ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ಅನುಮೋದನೆ ಸಿಗುತ್ತಾ? ಎಂಬುದು ಬಜೆಟ್ ಮಂಡನೆಯ ನಂತರ ಸ್ಪಷ್ಟವಾಗಲಿದೆ.
ಜಿಲ್ಲೆಯ ಅಭಿವೃದ್ಧಿ ಹಾಗೂ ಸ್ಥಳೀಯರ ಜೀವನಮಟ್ಟ ಸುಧಾರಣೆಗೆ ಹಾಗೂ ವಿಶೇಷವಾಗಿ ಉದ್ಯೋಗ ಸೃಷ್ಟಿಗೆ ಜಿಲ್ಲೆಯ ಇಬ್ಬರೂ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಸಂಪೂರ್ಣ ವಿಫಲರಾಗಿದ್ದಾರೆ.
ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ರಾಜ್ಯ ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನವಂತೂ ಮಾಡಿದ ಇವರು ಬರೀ ಸ್ವಾರ್ಥದ ರಾಜಕಾರಣಕ್ಕೆ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಕಾರ್ಯವನ್ನು ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಬೀದರ್ ನಗರದ ಪಾಪನಾಶ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಯನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ 2024 ಮಾರ್ಚ್ 7ರಂದು ಶಂಕುಸ್ಥಾಪನೆ ನೆರವೇರಿಸಿದ್ದರು, ಕ್ರೆಡಿಟ್ ಪಡೆಯುವ ಹಪಾಹಪಿಯಲ್ಲಿ ಸಚಿವ ಈಶ್ವರ ಖಂಡ್ರೆ ಹಾಗೂ ಇವರ ಮಗ ಕಾಂಗ್ರೆಸ್ ಸಂಸದ ಸಾಗರ್ ಖಂಡ್ರೆ ಪುನಃ ಫೆಬ್ರವರಿ 7ರಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ಕುರಿತು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿಕೆ ಪ್ರಕಾರ 22 ಕೋಟಿ ಅನುದಾನ ಅವರ ಪ್ರಯತ್ನದಿಂದ ಬಂದಿದೆ ಅಂತ ಹೇಳುತ್ತಿದ್ದಾರೆ, ಸಂಸದ ಸಾಗರ್ ಖಂಡ್ರೆ ಸಹ 22 ಕೋಟಿ ಅನುದಾನ ತಂದಿರುವುದಾಗಿ ಹೇಳುತ್ತಾರೆ ಒಂದೇ ಕಾಮಗಾರಿಗೆ 44 ಕೋಟಿ ಖರ್ಚು ಮಾಡುವ ಬದಲು ಬಸವೇಶ್ವರ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಉಪಯೋಗಿಸಿದ್ದಾರೆ ಸದುಪಯೋಗ ಆಗುತ್ತಿದೆ, ಅದು ರಾಜಕೀಯ ಗುದ್ದಾಟದಲ್ಲಿ ಕಾಲ ಹರಣ ಮಾಡುವ ಕೈಲಾಗದವರು ಕದ್ದು ತಿಂದಂತೆ ಕಾಂಗ್ರೆಸ್ ಜನಪ್ರತಿನಿಧಿಗಳ ವರ್ತನೆಯಾಗಿದೆ.
ಅವರ ತಾಕತ್ತು ಜಿಲ್ಲೆಗೆ ಅನುಕೂಲ ಆಗಲು ಮುಂಬರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ತೋರಿಸಲಿ, ಇಲ್ಲ ಜಿಲ್ಲೆಗೆ ಚೊಂಬೇ ಗತಿ ಎಂದು ಬಹಿರಂಗಪಡಿಸಿ ರಾಜಕೀಯದಿಂದ ನಿವೃತ್ತಿ ಪಡೆಯಲಿ ಎಂದು ಸಾಮಾಜ ಸೇವಕ ವಿ.ಕೆ.ದೇಶಪಾಂಡೆ ಹೊಸದಿಗಂತಕ್ಕೆ ಪ್ರತಿಕ್ರಿಯಿಸಿದ್ದಾರೆ.



