ಹೊಸದಿಗಂತ ವರದಿ, ದಾವಣಗೆರೆ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವತ್ತೇ ಮುಖ್ಯಮಂತ್ರಿ ಆಗಲಿ ಎನ್ನುವವರಲ್ಲಿ ನಾನೇ ಮೊದಲಿಗ. ಆದರೆ, ಅದೆಲ್ಲವನ್ನೂ ತೀರ್ಮಾನ ಮಾಡುವುದು ನಮ್ಮ ಪಕ್ಷದ ಹೈಕಮಾಂಡ್. ಹಾಗಾಗಿ ಈ ವಿಚಾರದ ಬಗ್ಗೆ ಹೈಕಮಾಂಡ್ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಬಗ್ಗೆ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆಂದು ಡಿಸೆಂಬರ್ ನಲ್ಲೇ ನಾನು ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ನನ್ನ ಮಾತಿಗೆ ಬದ್ಧನಿದ್ದೇನೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್, ಸಿಎಂ ಸಿದ್ದರಾಮಯ್ಯನವರು ಸ್ಪಷ್ಟಪಡಿಸಬೇಕು. ಆಗ ನಾವು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದೂ ತಪ್ಪುತ್ತದೆ. ಆಗ ಯಾವುದೇ ಗೊಂದಲ ಸಹ ಇರುವುದಿಲ್ಲ ಎಂದರು.
ಡಿಕೆಶಿ ಆಪ್ತ ಶಾಸಕರನ್ನು ಬೀದಿ ನಾಯಿಗೆ ಹೋಲಿಸಿರುವ ಡಾ.ಹೆಚ್.ಸಿ.ಮಹದೇವಪ್ಪ ಅಂತಹ ಪದ ಬಳಸಬಾರದು. ಅವರೂ ಶಾಸಕರೇ ತಾನೇ? ಶಾಸಕರನ್ನು ನಾಯಿಗೆ ಹೋಲಿಕೆ ಮಾಡಿದರೆ, ಹೀಗೆ ಹೋಲಿಕೆ ಮಾಡಿದವರೂ ಅದೇ ತಾನೇ? ಅದು ಡಿ.ಕೆ.ಶಿವಕುಮಾರ ಬಣ ಇರಬಹುದು ಅಥವಾ ಸಿದ್ದರಾಮಯ್ಯನವರ ಬಣ ಇರಬಹುದು. ಹಿರಿಯ ನಾಯಕರಾಗಿ ಹೀಗೆಲ್ಲಾ ಶಾಸಕರನ್ನು ನಾಯಿಗೆ ಹೋಲಿಕೆ ಮಾಡುವುದು ಸರಿಯಲ್ಲ. ತಾವು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯೋದು ಶೋಭೆ ತರುವುದಿಲ್ಲ ಎಂದು ಅವರು ಕಿಡಿಕಾರಿದರು.
ಬಜೆಟ್ ಪೂರ್ವಭಾವಿ ಸಭೆಗಳ ಹೊತ್ತಿನಲ್ಲಿ ಶಾಸಕರ ವಿದೇಶ ಪ್ರವಾಸದ ಅವಶ್ಯಕತೆಯೇ ಇರಲಿಲ್ಲ. ಸಭೆಗಳಲ್ಲಿ ಪಾಲ್ಗೊಂಡು, ತಂತಮ್ಮ ಕ್ಷೇತ್ರಕ್ಕೆ ಅನುದಾನ, ಆಗಬೇಕಾದ ಕೆಲಸ-ಕಾರ್ಯ, ಯೋಜನೆಗಳನ್ನು ಕೇಳಬೇಕಿತ್ತು. ವೈಯಕ್ತಿಕ ಕಾರಣಕ್ಕೋ, ಯಾರಾದರೂ ಕಳಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ, ವಿದೇಶ ಪ್ರವಾಸ ಕೈಗೊಳ್ಳಲು ಶಾಸಕರು ಸ್ವತಂತ್ರರಿದ್ದಾರೆ. ವಿದೇಶ ಪ್ರವಾಸಕ್ಕೆ ಹೋಗುವ ಶಾಸಕರಿಗೆ ಶುಭ ಕೋರುತ್ತೇನೆ. ಜಗಳೂರು ಶಾಸಕ ಬಿ.ದೇವೇಂದ್ರಪ್ಪ ನಮ್ಮ ಆತ್ಮೀಯರು. ಅವರೂ ವಿದೇಶ ಪ್ರವಾಸಕ್ಕೆ ಹೊರಟ್ದಿದ್ದಾರೆಂಬುದನ್ನು ಕೇಳಲ್ಪಟ್ಟೆ. ದೇವೇಂದ್ರಪ್ಪನವರಿಗೂ ಕರೆ ಮಾಡಿ, ವಿದೇಶ ಪ್ರವಾಸಕ್ಕೆ ಶುಭ ಕೋರುತ್ತೇನೆ ಎಂದು ಬಸವರಾಜ ಶಿವಗಂಗಾ ಹೇಳಿದರು.
ಸಿದ್ದರಾಮಯ್ಯ ಯಾರ ಮೇಲೆ ಪ್ರಮಾಣ ಮಾಡಿದ್ದಾರೋ ಗೊತ್ತಿಲ್ಲ. ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ವಿಪಕ್ಷ ಸತ್ತುಹೋಗಿದೆ. ಮುಂದಿನ ಸಿಎಂ ಬಗ್ಗೆ ಬಿಜೆಪಿಯವರು ಈಗಲೇ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್ ಜನಪರ ಕೆಲಸ ಮಾಡಿ, ಜನರ ಮನ್ನಣೆ ಗಳಿಸಿದೆ. ಮುಂದಿನ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದಂತೆ 141ಕ್ಕಿಂತ ಹೆಚ್ಚು ಸ್ಥಾನ ಕಾಂಗ್ರೆಸ್ಸಿಗೆ ಬರುತ್ತವೆ. ಆದರೆ, ಮುಖ್ಯಮಂತ್ರಿ ಕುರ್ಚಿ ಕುರಿತ ಹೇಳಿಕೆ, ಗೊಂದಲದಿಂದ ನಾವೇ ಆಡಳಿತ ಪಕ್ಷ-ನಾವೇ ವಿರೋಧ ಪಕ್ಷದಂತಾಗಿದ್ದೇವೆ. ತಕ್ಷಣವೇ ಹೈಕಮಾಂಡ್ ಮಧ್ಯಪ್ರವೇಶ ಮಾಡಿ, ಸಿಎಂ ಕುರ್ಚಿ ವಿಚಾರ ಇತ್ಯರ್ಥಪಡಿಸಲಿ ಎಂದು ಅವರು ಮನವಿ ಮಾಡಿದರು.



