ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕಸ ವಿಲೇವಾರಿ ವಿಚಾರವೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರಿನ ತ್ಯಾಜ್ಯವನ್ನು ದೊಡ್ಡಬಳ್ಳಾಪುರಕ್ಕೆ ನಿಯಮಬಾಹಿರವಾಗಿ ಸಾಗಿಸಲಾಗುತ್ತಿದೆ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತ್ಯಂತ ಕಠಿಣ ಶಬ್ದಗಳಲ್ಲಿ ಉತ್ತರ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಬಿಜೆಪಿಯ ಎಲ್ಲಾ ಶಾಸಕರು ಕಸದ ನೆಪವೊಡ್ಡಿ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಇಳಿದಿದ್ದಾರೆ. ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯುವ ಉದ್ದೇಶದಿಂದ ಇತ್ತೀಚೆಗೆ ನಡೆದ ಅಪಘಾತದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಎಲ್ಲರೂ ಗೌರವದಿಂದ ವರ್ತಿಸಿದರೆ ಸರಿ, ಇಲ್ಲದಿದ್ದರೆ ನಾವು ಕರುಣೆ ತೋರಿಸುವುದಿಲ್ಲ,” ಎಂದು ಎಚ್ಚರಿಸಿದರು.
ಕಸದ ವಿಲೇವಾರಿಗೆ ಅಡ್ಡಿಪಡಿಸುತ್ತಿರುವ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ನಗರದ ಕಸವನ್ನು ಎಲ್ಲಾದರೂ ಒಂದು ಕಡೆ ವಿಲೇವಾರಿ ಮಾಡಲೇಬೇಕು. ಅಲ್ಲೂ ಬೇಡ, ಇಲ್ಲೂ ಬೇಡ ಎಂದರೆ ಕಸವನ್ನು ಎಲ್ಲಿಗೆ ಹಾಕಬೇಕು? ಸುಮ್ಮನೆ ತಕರಾರು ತೆಗೆದರೆ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಅವರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿಯ ಮುಂದೆಯೇ ಕಸದ ರಾಶಿ ಹಾಕಿಸಬೇಕಾಗುತ್ತದೆ,” ಎಂದು ವಾರ್ನಿಂಗ್ ನೀಡಿದರು.
ಕಸ ವಿಲೇವಾರಿಯಂತಹ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ದುರದೃಷ್ಟಕರ, ಈ ಬಗ್ಗೆ ಪೊಲೀಸರು ಈಗಾಗಲೇ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.



