ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮವಾಗಿ ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರಾವಳಿ, ಮಲೆನಾಡು ಭಾಗದ ಆರು ಜಿಲ್ಲೆಗಳಲ್ಲಿ ಇಂದಿನಿಂದ ತುಸು ಜೋರು ಮಳೆಯೇ ಬೀಳಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಮುಂದಿನ 4 ದಿನಗಳ ಕಾಲ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಬೇಸಿಗೆಯ ವಾತಾವರಣವಿದ್ದು, ಕೆಲವು ಕಡೆ ಮಾತ್ರ ಮೋಡಕವಿದ ವಾತಾವರಣವಿದೆ.



