ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಜೋಡಿಯ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ಧೂಳೆಬ್ಬಿಸುವ ಯಶಸ್ಸು ಎಲ್ಲರಿಗೂ ತಿಳಿದಿದೆ. ಈಗ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದರೂ, ಅಭಿಮಾನಿಗಳು ಮಾತ್ರ ಈ ಜೋಡಿಯ ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಆ ನಿರೀಕ್ಷೆಗೆ ಈಗ ತರುಣ್ ಸುಧೀರ್ ಅವರ ಮಾತುಗಳು ಮತ್ತಷ್ಟು ಜೀವ ತುಂಬಿವೆ.
ಸದ್ಯದ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ದರ್ಶನ್ ಅವರ ಮೇಲೆ ತಮಗಿರುವ ವಿಶ್ವಾಸವನ್ನು ತರುಣ್ ಸುಧೀರ್ ವ್ಯಕ್ತಪಡಿಸಿದ್ದಾರೆ. “ದರ್ಶನ್ ಅವರು ಆದಷ್ಟು ಬೇಗ ಈ ಕಷ್ಟದ ದಿನಗಳಿಂದ ಹೊರಬರಲಿ ಎಂದು ಕಾಯುತ್ತಿದ್ದೇನೆ. ಅವರು ಯಾವಾಗ ಕರೆದು ಸಿನಿಮಾ ಮಾಡೋಣ ಎನ್ನುತ್ತಾರೋ, ಅದರ ಮರುದಿನವೇ ನಾನು ಕೆಲಸ ಆರಂಭಿಸಲು ಸಿದ್ಧನಿದ್ದೇನೆ. ಅವರಿಗಾಗಿ ಸ್ಕ್ರಿಪ್ಟ್ ಕೂಡ ಸಿದ್ಧಪಡಿಸಿಟ್ಟುಕೊಳ್ಳುತ್ತೇವೆ” ಎಂದು ಹೇಳುವ ಮೂಲಕ ದರ್ಶನ್ ಅವರ ಕಮ್‌ಬ್ಯಾಕ್ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.



