July 18, 2026
Saturday, July 18, 2026
spot_img

ತಮಿಳುನಾಡು ವಿಧಾನಸಭೆಯಲ್ಲಿ ಹೈ-ಡ್ರಾಮಾ: ಸಿಎಂ ವಿಜಯ್ ವಿರುದ್ಧ ಉದಯನಿಧಿ ಸ್ಟಾಲಿನ್ ವೈಯಕ್ತಿಕ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ಡಿಎಂಕೆ ಯುವನಾಯಕ ಉದಯನಿಧಿ ಸ್ಟಾಲಿನ್ ನಡುವಿನ ರಾಜಕೀಯ ಯುದ್ಧ ವೈಯಕ್ತಿಕ ಕೆಸರೆರಚಾಟಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ಭ್ರಷ್ಟಾಚಾರದ ಆರೋಪ ಹೊರಿಸಿದ ಮುಖ್ಯಮಂತ್ರಿ ವಿಜಯ್, “ಪಕ್ಷದ ನಿಧಿ ಹೆಸರಿನಲ್ಲಿ ದುರುಪಯೋಗಗೊಂಡಿರುವ ಸಾರ್ವಜನಿಕರ ಹಣವನ್ನು ನಮ್ಮ ಸರ್ಕಾರ ಅಧಿಕಾರ ಬಳಸಿ ವಾಪಸ್ ಪಡೆಯಲಿದೆ” ಎಂದು ಗುಡುಗಿದ್ದರು. ಇದಕ್ಕೆ ತೀಕ್ಷ್ಣ ಆಕ್ಷೇಪ ವ್ಯಕ್ತಪಡಿಸಿದ ಉದಯನಿಧಿ ಸ್ಟಾಲಿನ್, ಸಾಕ್ಷ್ಯಗಳಿದ್ದರೆ ಮಾತ್ರ ಇಂತಹ ಆರೋಪಗಳನ್ನು ಮಾಡಬೇಕು ಎಂದು ಸವಾಲು ಹಾಕಿದ್ದರು.

ತಂದೆಯ ಸನ್ನೆ ಅಣಕಿಸಿದ ಸಿಎಂ ವಿಜಯ್:

ಇದಾದ ಬಳಿಕ ಡಿಎಂಕೆ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸದನದಿಂದ ಹೊರನಡೆದರು. ಈ ವೇಳೆ ಮುಖ್ಯಮಂತ್ರಿ ವಿಜಯ್ ತಮ್ಮ ಭಾಷಣದ ಕೊನೆಯಲ್ಲಿ, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಿಂದೆ ವೈರಲ್ ಆಗಿದ್ದ ಕೈಸನ್ನೆಯೊಂದನ್ನು ತಾವೂ ಮಾಡಿ ತೋರಿಸಿ ಅಣಕಿಸಿದರು. ಇದು ಆಡಳಿತ ಪಕ್ಷದ ಸದಸ್ಯರ ಭಾರಿ ಮೇಜು ತಟ್ಟುವಿಕೆಗೆ ಮತ್ತು ಹರ್ಷೋದ್ಗಾರಕ್ಕೆ ಕಾರಣವಾಯಿತು.

ಇದನ್ನೂ ಓದಿ:

ಎಕ್ಸ್ ನಲ್ಲಿ ದಾಂಪತ್ಯ ಕಲಹ ಕೆದಕಿದ ಉದಯನಿಧಿ:

ಮುಖ್ಯಮಂತ್ರಿಯ ಈ ಸಿನಿಮೀಯ ಹಾವಭಾವ ಹಾಗೂ ತಮ್ಮ ತಂದೆಯ ವರ್ತನೆಯನ್ನು ಅಣಕಿಸಿದ್ದರಿಂದ ತೀವ್ರ ಆಕ್ರೋಶಗೊಂಡ ಉದಯನಿಧಿ ಸ್ಟಾಲಿನ್, ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಪ್ರಸ್ತುತ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಮುಖ್ಯಮಂತ್ರಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ವಿಚ್ಛೇದನ ಅರ್ಜಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದೆ ಎಂದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಮುಖ್ಯಮಂತ್ರಿಯ ಖಾಸಗಿ ಜೀವನವನ್ನು ರಾಜಕೀಯಕ್ಕೆ ಎಳೆದು ತಂದಿದ್ದಕ್ಕೆ ಟಿವಿಕೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಇಬ್ಬರು ಯುವ ನಾಯಕರ ನಡುವಿನ ಈ ನೇರ ವೈಯಕ್ತಿಕ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !